ಮಂಡ್ಯ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯ ರಾಜಕೀಯಕ್ಕೆ ಸಂಸದೆ ಸುಮಲತಾ ಅಂಬರೀಶ್ ಎಂಟ್ರಿ ಕೊಡಲಿದ್ದಾರಾ? ಎಂಬ ಕುತೂಹಲ ಹೆಚ್ಚುತ್ತಿದೆ. ಇಂದು ನಡೆದ ಬೆಂಬಲಿಗರ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಮಂಡದಲ್ಲಿ ನಡೆದ 7 ವಿಧಾನಸಭಾ ಕ್ಷೇತ್ರದ ಬೆಂಬಲಿಗರ ಸಭೆಯಲ್ಲಿ ಸುಮಲತಾ ಅಂಬರೀಶ್ ರಾಜ್ಯ ರಾಜಕೀಯಕ್ಕೆ ಬರಲೇಬೇಕು ಎಂದು ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯ ರಾಜಕೀಯಕ್ಕೆ ಸುಮಲತಾ ಬಂದರೆ ಯಾವ ಪಕ್ಷ ಸೇರ್ಪಡೆಯಾಗಬೇಕು ಎಂಬ ಬಗ್ಗೆಯೂ ಬೆಂಬಲಿಗರು ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಲ ಬೆಂಬಲಿಗರು ಸುಮಲತಾ ಬಿಜೆಪಿಗೆ ಸೇರ್ಪಡೆಯಾಗಬೇಕು ಎಂದು ಹೇಳಿದ್ದರೆ ಮತ್ತೆ ಕೆಲ ಬೆಂಬಲಿಗರು ಸುಮಲತಾ ಕಾಂಗ್ರೆಸ್ ಸೇರುವುದು ಸೂಕ್ತ. ಸುಮಲತಾ ಪತಿ ಅಂಬರೀಶ್ ಅವರು 25 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿ ಇದ್ದವರು. ಈ ನಿಟ್ಟಿನಲ್ಲಿ ಸುಮಲತಾ ಕಾಂಗ್ರೆಸ್ ಗೆ ಸೇರ್ಪಡೆಯಾಗಿ ಸ್ಪರ್ಧಿಸಿದರೆ ಗೆಲುವು ಖಚಿತ ಎಂದು ಹೇಳಿದ್ದಾರೆ.
ಇದೇ ವೇಳೆ ಸ್ಪರ್ಧಾ ಕ್ಷೇತ್ರದ ಬಗ್ಗೆಯೂ ಚರ್ಚೆಯಾಗಿದ್ದು, ಮಂಡ್ಯ ಅಥವಾ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಅಭಿಪ್ರಾಯ ಕೂಡ ಕೇಳಿಬಂದಿದೆ. ಅಂತಿಮವಾಗಿ ಸುಮಲತಾ ರಾಜ್ಯ ರಾಜಕೀಯಕ್ಕೆ ಎಂಟ್ರಿಯಾಗಿ ಯಾವ ಪಕ್ಷದಿಂದ ಸ್ಪರ್ಧೆಗೆ ಮುಂದಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.