ಕಳೆದ ಕೆಲವು ದಿನಗಳಿಂದ ತಮ್ಮ ಹೇಳಿಕೆಗಳ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಇಂದು ಬೆಳಗ್ಗೆ ಬೆಂಗಳೂರಿನ ‘ಪಾರಿಜಾತ’ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದು, ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಹಲವು ವರ್ಷಗಳ ಕಾಲ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದ ಜನಾರ್ದನ ರೆಡ್ಡಿಯವರು ಈಗ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮತ್ತೆ ಚುನಾವಣಾ ರಾಜಕೀಯಕ್ಕೆ ಮರಳಲು ಚಿಂತನೆ ನಡೆಸಿದ್ದು, ಈ ವಿಚಾರವನ್ನು ಈಗಾಗಲೇ ಹಲವು ಬಾರಿ ವ್ಯಕ್ತಪಡಿಸಿದ್ದಾರೆ.
ಆದರೆ ಅವರ ಮಾತೃ ಪಕ್ಷ ಬಿಜೆಪಿ, ಜನಾರ್ಧನ ರೆಡ್ಡಿ ಸಕ್ರಿಯ ರಾಜಕಾರಣ ಪ್ರವೇಶ ಕುರಿತಂತೆ ಈವರೆಗೆ ಯಾವುದೇ ಪ್ರಕ್ರಿಯೆ ನೀಡದಿರುವುದರ ಹಿನ್ನೆಲೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಇಂದಿನ ಪತ್ರಿಕಾಗೋಷ್ಠಿಯಲ್ಲಿ ಬಹುತೇಕ ಹೊಸ ಪಕ್ಷ ಸ್ಥಾಪನೆ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ.
ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಈಗಾಗಲೇ ಮನೆ ಮಾಡಿದ್ದು, ಅಲ್ಲಿಂದಲೇ ತಮ್ಮ ರಾಜಕೀಯ ಚಟುವಟಿಕೆ ನಡೆಸಲು ನಿರ್ಧರಿಸಿದ್ದಾರೆ. ಆದರೆ ಹೊಸ ಪಕ್ಷ ಸ್ಥಾಪನೆ ಕುರಿತ ಘೋಷಣೆಯನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೇ ಮಾಡಲು ತೀರ್ಮಾನಿಸಿದ್ದು, ಹೀಗಾಗಿಯೇ ಇಂದಿನ ಪತ್ರಿಕಾಗೋಷ್ಠಿಯಲ್ಲಿ ಹಲವು ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.