ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಆರಂಭವಾಗಿದ್ದು, ಈ ಬಜೆಟ್ ಮುಂದಿನ 25 ವರ್ಷಗಳ ದೂರದೃಷ್ಟಿ ಹೊಂದಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಭಾಷಣ ಆರಂಭಿಸಿದ ಸಿಎಂ ಬೊಮ್ಮಾಯಿ, ಹೋಗುತಿದೆ ಹಳೆ ಕಾಲ ಹೊಸ ಕಾಲ ಬರುತಲಿದೆ… ಎಂಬ ಕುವೆಂಪು ಅವರ ಕವನ ಹೇಳುವ ಮೂಲಕ ಬಜೆಟ್ ಮಂಡನೆ ಆರಂಭಿಸಿದರು. ಬಜೆಟ್ ಆರಂಭದಲ್ಲೇ ಸಿಎಂ ಬೊಮ್ಮಾಯಿ ಅವರು ವಿಪಕ್ಷಗಳ ವಿರುದ್ಧ ಗರಂ ಆದರು. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಇಷ್ಟು ದಿನ ಜನರ ಕಿವಿ ಮೇಲೆ ಹೂವಿಡುತ್ತಿದ್ದವು. ಇನ್ಮುಂದೆ ಜನರೇ ಅವರ ಕಿವಿ ಮೇಲೆ ಹೂವಿಡಲಿದ್ದಾರೆ ಎಂದು ಹೇಳಿದರು.
ಸಿಎಂ ಬೊಮ್ಮಾಯಿ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಕೆಲ ಕಾಲ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲ ಆರಂಭವಾದ ಪ್ರಸಂಗ ನಡೆಯಿತು. ಬಳಿಕ ಸ್ಪೀಕರ್ ಕಾಗೇರಿ ಬಜೆಟ್ ಮಂಡನೆಗೆ ಮುಖ್ಯಮಂತ್ರಿಗಳಿಗೆ ಅವಕಾಶ ಕೊಡುವಂತೆ ಸೂಚಿಸಿದರು.