ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಒಮ್ಮತ ಮೂಡದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಗೆ ಬುಲಾವ್ ನೀಡಿದೆ.
ಪರಿಷತ್ ಚುನಾವಣೆಗೆ ಎಸ್.ಆರ್.ಪಾಟೀಲ್ ಅವರಿಗೆ ಟಿಕೆಟ್ ನೀಡಬೇಕು ಎಂಬುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಮತ, ಆದರೆ ಎಸ್.ಆರ್.ಪಾಟೀಲ್ ಅವರನ್ನು ಬಿಟ್ಟು ಎಂ.ಬಿ.ಪಾಟೀಲ್ ಅಥವಾ ಬೇರೆಯವರಿಗೆ ಟಿಕೆಟ್ ಕೊಡಿಸಬೇಕು ಎಂಬುದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಒಲವು ಎಂಬ ಮಾತು ಕೇಳಿಬರುತ್ತಿದೆ. ಪರಿಷತ್ ಟಿಕೆಟ್ ವಿಚಾರವಾಗಿ ರಾಜ್ಯ ನಾಯಕರಲ್ಲಿ ಗೊಂದಲವುಂಟಾಗಿದ್ದು, ಇದೇ ಕಾರಣಕ್ಕೆ ವರಿಷ್ಠರ ಭೇಟಿಗೆ ಮುಂದಾಗಿದ್ದಾರೆ.
ಮಂಗಳೂರಿಗೆ ಭೇಟಿ ನೀಡಿರುವ ಡಿ.ಕೆ.ಶಿವಕುಮಾರ್ ವರಿಷ್ಠರ ತುರ್ತು ಬುಲಾವ್ ಹಿನ್ನೆಲೆಯಲ್ಲಿ ಅಲ್ಲಿಂದಲೇ ದೆಹಲಿಗೆ ತೆರಳುತ್ತಿದ್ದು, ನಾಳೆ ಬೆಳಿಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಮತ್ತೊಂದು ಮಾಹಿತಿ ಪ್ರಕಾರ ಎಸ್.ಆರ್. ಪಾಟೀಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದ್ದು, ಈ ನಿಟ್ಟಿನಲ್ಲಿ ಸಿದ್ಧತೆ ಕೂಡ ನಡೆದಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಪರಿಷತ್ ಚುನಾವಣೆ ಚಟುವಟಿಕೆಗಳು ಗರಿಗೆದರಿರುವ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಗೆ ಕರೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.