ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ಪ್ರವಾಸಕ್ಕೆ ಆಗಮಿಸುತ್ತಿದ್ದು, ಪ್ರಧಾನಿ ಆಗಮನ ವಿರೋಧಿಸಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಿಸಾನ್ ಘಟಕದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಚಿಕ್ಕಮಗಳೂರಿನಿಂದ 40 ವಾಹನಗಳಲ್ಲಿ ಕೆಐಎಗೆ ಮುತ್ತಿಗೆ ಹಾಕಲು ಹೊರಟಿದ್ದರು. ನೂರಾರು ಕಾರ್ಯಕರ್ತರು ಕೈಗೆ ಕಪ್ಪು ಪಟ್ಟಿ ಧರಿಸಿಕೊಂಡು ’ಪ್ರಧಾನಿ ಗೋ ಬ್ಯಾಕ್’ ಎಂಬ ಘೋಷಣೆಗಳನ್ನು ಕೂಗುತ್ತಾ ಕೆಂಪೇಗೌಡ ವಿಮಾನ ನಿಲ್ದಾಣದತ್ತ ಧಾವಿಸಿದ್ದರು.
ಈ ವೇಳೆ ಮಾರ್ಗ ಮಧ್ಯೆಯೇ ಪೊಲೀಸರು ಕಿಸಾನ್ ಘಟಕದ ಕಾರ್ಯಕರ್ತರನ್ನು ತಡೆದಿದ್ದಾರೆ. ಈ ನಡುವೆ ಪೊಲೀಸರು ಹಾಗೂ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ನಡುವೆ ವಾಗ್ವಾದ ನಡೆದಿದೆ. ಕಾರ್ಯಕರ್ತರನ್ನು ಮುಂದುವರೆಯಲು ಬಿಡದ ಪೊಲೀಸರು ಸಚಿನ್ ಮಿಗಾ ಸೇರಿದಂತೆ ಹಲವರನ್ನು ವಶಕ್ಕೆ ಪಡೆದಿದ್ದಾರೆ.