ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಭಾರತ್ ಬಂದ್ ಪ್ರತಿಭಟನೆ ವಿವಿಧ ಜಿಲ್ಲೆಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ರೈತ ಸಂಘಟನೆಗಳ ಪ್ರತಿಭಟನೆಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಟೌನ್ ಹಾಲ್ ಮುಂಭಾಗ ಸೇರಿರುವ ಪ್ರತಿಭಟನಾಕಾರರು ಒಂದೆಡೆ ಪ್ರಧಾನಿ ಮೋದಿ ಅವರ 10 ತಲೆ ಪೋಸ್ಟರ್ ಹಿಡಿದು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಕರವೇ ಕಾರ್ಯಕರ್ತರು ರಸ್ತೆಯಲ್ಲಿಯೇ ಉರುಳು ಸೇವೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮೈಸೂರು – ಬೆಂಗಳೂರು ಹೆದ್ದಾರಿ ತಡೆ ನಡೆಸಿರುವ ರೈತ ಸಂಘಟನೆಗಳು ರಸ್ತೆ ಮಧ್ಯೆಯೇ ಧರಣಿ ನಡೆಸಿದ್ದಾರೆ. ಇದೇ ವೇಳೆ ಮದ್ದೂರು ತಾಲೂಕು ಗೆಜ್ಜಲಗೆರೆ ಗ್ರಾಮದಲ್ಲಿ ಹೆದ್ದಾರಿ ಮಧ್ಯೆ ಮಹಾತ್ಮ ಗಾಂಧೀಜಿ ಫೋಟೋ ಇಟ್ಟು ಧರಣಿ ನಡೆಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆರಗು ಹುಟ್ಟಿಸುತ್ತೆ ಈ ಗ್ರಾಮೀಣ ಪ್ರತಿಭೆಯ ಯಶಸ್ಸಿನ ಸಾಧನೆ
ಚಿಕ್ಕಬಳ್ಳಾಪುರದಲ್ಲಿ ಹೂವು ಬೆಳೆಗಾರರು ರಸ್ತೆಗಳಿಗೆ ಹೂಗಳನ್ನು ಚೆಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಕೋಲಾರದಲ್ಲಿ ಕತ್ತೆಗಳ ಮೆರವಣಿಗೆ ನಡೆಸಿರುವ ರೈತರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಪಂಜಿನ ಮೆರವಣಿಗೆ ನಡೆಸಿದ್ದು, ಹೆದ್ದಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಲಾಗಿದ್ದು, ಬೈಕ್ ಜಾಥಾ ನಡೆಸಿದ್ದಾರೆ.
ಒಟ್ಟಾರೆ ರಾಜ್ಯಾದ್ಯಂತ ಅನ್ನದಾತನ ಆಕ್ರೋಶ ಭುಗಿಲೆದ್ದಿದ್ದು, ರೈತ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.