ಬೆಂಗಳೂರು: ನಾಳೆ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಲ್ಲಿ ಅಡ್ಡ ಮತದಾನದ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಶಾಸಕರೊಂದಿಗೆ ಹೋಟೆಲ್ ಗೆ ಶಿಫ್ಟ್ ಆಗಿದ್ದಾರೆ.
ನಿನ್ನೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಹೋಟೆಲ್ ನಲ್ಲಿ ತಂಗಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್ ಶಾಸಕರು ಇದೀಗ ವಸಂತಪುರ ಬಳಿಯ ತಾಜ್ ವಿವಾಂತ್ ಹೋಟೆಲ್ ಗೆ ಸ್ಥಳಾಂತರಗೊಂಡಿದ್ದಾರೆ. ಸಂಜೆ ಜೆಡಿಎಸ್ ಶಾಸಕರ ಸಭೆ ನಡೆಸಲಿರುವ ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಮತಹಾಕುವಂತೆ ಸೂಚಿಸಲಿದ್ದಾರೆ.
ಈಗಾಗಲೇ ಜೆಡಿಎಸ್ ನ ಅಸಮಾಧಾನಿತ ಶಾಸಕರೊಂದಿಗೂ ಮಾತುಕತೆ ನಡೆಸಿರುವ ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ಗುಬ್ಬಿ ವಾಸು, ಎ.ಟಿ.ರಾಮಸ್ವಾಮಿ, ಶ್ರೀನಿವಾಸ್ ಗೌಡ, ಶಿವಲಿಂಗೇಗೌಡ ಅವರೊಂದಿಗೆ ಚರ್ಚಿಸಿದ್ದಾರೆ.