ಬೆಂಗಳೂರು: ರಾಜ್ಯಸಭಾ ಚುನಾವಣೆ ರೋಚಕ ಘಟ್ಟ ತಲುಪಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಈ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಕುಮಾರಸ್ವಾಮಿ ಆಹ್ವಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಚರ್ಚೆಗೆ ಆಹ್ವಾನ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನುಡಿದಂತೆ ನಡೆದುಕೊಂಡವರ ಜತೆ ಮಾತ್ರ ಮಾತನಾಡಬಹುದು ಎಂದು ಗರಂ ಆಗಿದ್ದಾರೆ.
ಪಕ್ಷದಲ್ಲಿ ನಾನೂ ಕೂಡ ಒಬ್ಬ ಕಾರ್ಯಕರ್ತ. ನಾನೊಬ್ಬನೇ ಏನೂ ಮಾಡಲು ಸಾಧ್ಯವಿಲ್ಲ, ಪಕ್ಷದ ವರಿಷ್ಠರು, ನಾಯಕರ ಜತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತರ ಬಗ್ಗೆ ಒಲವಿದ್ದರೆ ಬೆಂಬಲಿಸಲಿ ಎಂದು ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿ,ಇದರಲ್ಲಿ ಭಾವನಾತ್ಮಕ, ಸ್ವಾಭಿಮಾನದ ವಿಚಾರವಿದೆ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ, ಒಪ್ಪುತ್ತೇನೆ. ಆದರೆ ನಾನೊಬ್ಬನೇ ಏನೂ ಮಾತನಾಡಲಾಗದು. ಸುರ್ಜೇವಾಲಾ ಜೆಡಿಎಸ್ ಬಳಿ ಮನವಿ ಮಾಡಿದ್ದಾರೆ ಎಂದರೆ ಹೈಕಮಾಂಡ್ ಮನವಿ ಮಾಡಿದಂತೆ. ಜೆಡಿಎಸ್ ಜಾತ್ಯಾತೀತ ಶಕ್ತಿ ಎಂಬ ಕಾರಣಕ್ಕೆ ಮನವಿ ಮಾಡಿದ್ದಾರೆ. ಕಾದು ನೋಡೋಣ ಎಂದು ಹೇಳಿದರು.