ಬೆಂಗಳೂರು: ಬಿಎಂಟಿಸಿ ಅಕ್ರಮದ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ್ದಕ್ಕೆ ಬೇಸತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದು ದೂರು ನೀಡಿದ್ದ ಚಾಲಕ ತ್ಯಾಗರಾಜ್ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ಬಿಎಂಟಿಸಿಯಲ್ಲಿನ ಅಕ್ರಮದ ಬಗ್ಗೆ ಎಂಡಿ ಸತ್ಯವತಿ ಅವರಿಗೆ ಚಾಲಕ ತ್ಯಾಗರಾಜ್, ದಾಖಲೆ ಸಮೇತ ದೂರು ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಳ್ಳದೇ ಬಿಎಂಟಿಸಿ ಚಾಲಕ ತ್ಯಾಗರಾಜ್ ಅವರಿಗೇ ನೋಟೀಸ್ ನೀಡಿತ್ತು. ಇದರಿಂದ ನೊಂದ ಚಾಲಕ ತ್ಯಾಗರಾಜ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಾರಿಗೆ ಇಲಾಖೆ ಸೆಕ್ರೆಟರಿ ಪ್ರಸಾದ್, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷಾ ಅವರಿಗೆ ಪತ್ರ ಬರೆದು ನ್ಯಾಯ ಕೇಳಿದ್ದರು.
ಇದೀಗ ತ್ಯಾಗರಾಜ್ ಅವರನ್ನೇ ಅಮಾನತುಗೊಳಿಸಿ ಬಿಎಂಟಿ ಎಂಡಿ ಸತ್ಯವತಿ ಆದೇಶ ಹೊರಡಿಸಿದ್ದಾರೆ. ಎಂಡಿ ಸಹಿಯನ್ನೇ ಫೋರ್ಜರಿ ಮಾಡಿ ಅಕ್ರಮವೆಸಗಿದ್ದ ಸಿಬ್ಬಂದಿಗಳನ್ನು ಕೇವಲ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.