ಬೆಂಗಳೂರು: ರಾಜ್ಯದಲ್ಲಿ ಮೂರು ಜಿಲ್ಲೆಗಳಲ್ಲಿ ರಾಷ್ಟ್ರೀಯ ತನಿಖಾ ದಳ-NIA ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದು, ಮೂವರು ಶಂಕಿತ ಉಗ್ರರನ್ನು ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ತುಮಕೂರು ಹಾಗೂ ಬೆಳಗಾವಿಯಲ್ಲಿ ದಾಳಿ ನಡೆಸಿರುವ ಎನ್ ಐ ಎ ಅಧಿಕಾರಿಗಳು ತಲಾ ಒಬ್ಬರಂತೆ ಮೂರು ಶಂಕಿತ ಉಗ್ರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇಂದು ಬೆಳಗಿನ ಜಾವ ಏಕಕಾಲದಲ್ಲಿ ಮೂರು ಕಡೆ ದಾಳಿ ನಡೆಸಲಾಗಿದೆ.
ಎನ್ ಐ ಎ ಹಾಗೂ ರಾಜ್ಯ ಗುಪ್ತದಳ ಅಧಿಕಾರಿಗಳಿಂದ ಈ ಕಾರ್ಯಾಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಭಟ್ಕಳದಲ್ಲಿ ಅಬ್ದುಲ್ ಮುಕ್ತದೀರ್ ಎಂಬ ಶಂಕಿತನನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನಿಬ್ಬರ ಹೆಸರು ಖಚಿತವಾಗಿ ತಿಳಿದುಬಂದಿಲ್ಲ. ಆದರೆ ಮೂವರು ಶಂಕಿತರು ಐಸಿಸ್ ಜತೆ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಮೇರೆಗೆ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.