ರಾಜ್ಯದ 13,800 ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 25 ಕ್ಕಿಂತ ಕಡಿಮೆ ಇದೆ ಎನ್ನಲಾಗಿದ್ದು, ಹೀಗಾಗಿ ಇವುಗಳನ್ನು ಮುಚ್ಚುವ ಭೀತಿ ಎದುರಾಗಿದೆ. ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ಈ ಪೈಕಿ 1,800 ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 10ಕ್ಕಿಂತ ಕಡಿಮೆ ಎನ್ನಲಾಗಿದೆ.
ಶಿಕ್ಷಣ ಇಲಾಖೆ ರಾಜ್ಯದ ಪ್ರತಿಯೊಂದು ಹೋಬಳಿಗಳಲ್ಲಿ ಮಾದರಿ ಶಾಲೆಗಳನ್ನು ಆರಂಭಿಸುವುದಾಗಿ ಹೇಳುತ್ತಿದ್ದು, ಆದರೆ ಈ ಹೆಸರಿನಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳನ್ನು ಮಾದರಿ ಶಾಲೆಗಳಿಗೆ ಕಳಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿರುವ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಶಿಕ್ಷಣ ಇಲಾಖೆ ಹೇಳುತ್ತಿದ್ದರೂ ಸಹ ಮಾದರಿ ಶಾಲೆಗಳ ಹೆಸರಿನಲ್ಲಿ ಈ ಕಾರ್ಯ ನಡೆಯುತ್ತದೆಯಾ ಎಂಬ ಅನುಮಾನ ಮೂಡಿದೆ.
ಆದರೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಲಾಗುವುದಿಲ್ಲ. ವಿದ್ಯಾರ್ಥಿಗಳ ಸಂಖ್ಯೆ 10ಕ್ಕಿಂತ ಕಡಿಮೆ ಇದ್ದರೂ ಸಹ ಅಂತಹ ಶಾಲೆಗಳನ್ನು ಸಹ ನಡೆಸಿಕೊಂಡು ಹೋಗಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಂಗನವಾಡಿಗಳಲ್ಲೂ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಪೋಷಕರು ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಮುಖ ಮಾಡಿರುವುದು ಇದಕ್ಕೆ ಕಾರಣವಾಗಿದೆ.