ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ನೂತನವಾಗಿ ಗುಜರಿ ನೀತಿಯನ್ನು ಜಾರಿಗೊಳಿಸಿದ್ದು, ಇದು ಈಗಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅನುಷ್ಠಾನಗೊಂಡಿದೆ. ಇತರೆ ರಾಜ್ಯಗಳಲ್ಲೂ ಇದನ್ನು ಜಾರಿಗೊಳಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಈಗಾಗಲೇ ಆದೇಶಿಸಿದೆ.
ಇದೀಗ ಕರ್ನಾಟಕದಲ್ಲೂ ಗುಜರಿ ನೀತಿಯನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದ್ದು, ಕೇಂದ್ರ ಸರ್ಕಾರದ ಸೂಚನೆಯಂತೆ ಸಾರಿಗೆ ಇಲಾಖೆಯಿಂದ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗುವ ನಿರೀಕ್ಷೆಯಿದೆ.
ರಾಜ್ಯದಲ್ಲಿ 15 ವರ್ಷ ಸವೆಸಿರುವ ಸುಮಾರು 90 ಲಕ್ಷ ವಾಹನಗಳು ಇವೆ ಎನ್ನಲಾಗಿದ್ದು, ಇದೀಗ ಈ ವಾಹನಗಳ ಮಾಲೀಕರಿಗೆ ಆತಂಕ ಶುರುವಾಗಿದೆ. ಗುಜರಿ ನೀತಿ ಜಾರಿಗೊಂಡ ಬಳಿಕ ಈ ವಾಹನಗಳು ಕಡ್ಡಾಯವಾಗಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಿದ್ದು, ಇದರಲ್ಲಿ ವಿಫಲವಾದರೆ ಅಂತಹ ವಾಹನಗಳು ಗುಜರಿ ಸೇರಬೇಕಾಗುತ್ತದೆ.
2022ರ ಮಾರ್ಚ್ ವರೆಗೆ ರಾಜ್ಯದಲ್ಲಿ ಒಟ್ಟು 90 ಲಕ್ಷ ವಾಹನಗಳು 15 ವರ್ಷ ಸವೆಸಿದ್ದು, ಈ ಪೈಕಿ 51.9 ಲಕ್ಷ ದ್ವಿಚಕ್ರ ವಾಹನಗಳು, 12.5 ಲಕ್ಷ ಕಾರುಗಳು, 3.1 ಲಕ್ಷ ಆಟೋಗಳು, 1.7 ಲಕ್ಷ ಟ್ರಕ್ ಗಳು ಹಾಗೂ 61,045 ಬಸ್ಸುಗಳು ಅಗ್ನಿಪರೀಕ್ಷೆಗೆ ಒಳಗಾಗಬೇಕಿದೆ. ಈ ಪೈಕಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ವಾಹನಗಳು ಇವೆ.
ಆದರೆ ರಾಜ್ಯದಲ್ಲಿ ಗುಜರಿ ನೀತಿಯನ್ನು ಮೊದಲ ಬಾರಿಗೆ ಜಾರಿಗೊಳಿಸುತ್ತಿರುವ ಕಾರಣ ಒಂದಷ್ಟು ರಿಯಾಯಿತಿಗಳನ್ನು ನೀಡುವ ಸಾಧ್ಯತೆಯಿದ್ದು, ವಾಹನಗಳು 15 ವರ್ಷ ಮೇಲ್ಪಟ್ಟಿದ್ದರೂ ಸಹ ಫಿಟ್ನೆಸ್ ಹೊಂದಿದ್ದ ಸಂದರ್ಭದಲ್ಲಿ ಒಂದೆರಡು ವರ್ಷಗಳ ಕಾಲ ಸಂಚಾರಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ.