ಬೆಂಗಳೂರು: ಕೇರಳ, ದೆಹಲಿಯಲ್ಲಿ ಪತ್ತೆಯಾಗಿದ್ದ ಮಂಕಿಪಾಕ್ಸ್ ಪ್ರಕರಣ ಇದೀಗ ಕರ್ನಾಟಕದಲ್ಲಿಯೂ ಪತ್ತೆಯಾಗಿದ್ದು, ಆಫ್ರಿಕಾ ದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯೋರ್ವರಲ್ಲಿ ಸೋಂಕು ಇರುವುದು ಗೊತ್ತಾಗಿದೆ.
ಕಿಡ್ನಿ ಕಸಿ ಮಾಡಿಸಿಕೊಳ್ಳಲು ಜುಲೈ 4ರಂದು ಆಫ್ರಿಕಾದಿಂದ ಬೆಂಗಳೂರಿನ ಆಸ್ಪತ್ರೆಗೆ ಆಗಮಿಸಿದ್ದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ರೋಗ ಲಕ್ಷಣಗಳು ಪತ್ತೆಯಾಗಿವೆ. ವ್ಯಕ್ತಿಯ ಮೈಮೇಲೆ ತುರಿಕೆ, ದೇಹದ ಭಾಗಗಳ ಮೇಲೆ ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿಕೊಂಡಿವೆ.
ಸೋಂಕಿತರನ್ನು ಎರಡು ಬಾರಿ ಪರೀಕ್ಷೆಗೆ ಒಳಪಡಿಸಿದಾಗಲೂ ಮಂಕಿಪಾಕ್ಸ್ ಲಕ್ಷಣ ದೃಢವಾಗಿದೆ ಎನ್ನಲಾಗಿದೆ. ಸೋಂಕಿತ ವ್ಯಕ್ತಿಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಈ ಮೂಲಕ ಇದು ರಾಜ್ಯದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಆತಂಕ ಎದುರಾಗಿದೆ.