ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಟಫ್ ರೂಲ್ಸ್ ಜಾರಿ ಮಾಡುವ ಅನಿವಾರ್ಯತೆ ಇದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಿಎಂ, ಕಠಿಣ ನಿಯಮಗಳಿಗೆ ಸಹಕರಿಸದಿದ್ದರೆ ಅನಿವಾರ್ಯವಾಗಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡುತ್ತೇವೆ ಎಂಬ ಸಚಿವ ಆರ್. ಅಶೋಕ್ ಹೇಳಿಕೆ ಕುರಿತು ಸ್ಪಷ್ಟನೆ ನೀಡುತ್ತಾ, ಕೋವಿಡ್ ಪ್ರಕರಣ ಹೆಚ್ಚುತ್ತಿರುವುದರಿಂದ ತಜ್ಞರು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಟಫ್ ರೂಲ್ಸ್ ಜಾರಿಗೆ ಸಲಹೆ ನೀಡಿದ್ದಾರೆ. ಅದರಂತೆ ಕಠಿಣ ನಿಯಮಗಳನ್ನು ಜಾರಿ ಮಾಡುತ್ತೇವೆ. ಒಂದು ವೇಳೆ ಜನರು ಕಠಿಣ ನಿಯಮಕ್ಕೆ ಸಹಕಾರ ನೀಡದಿದ್ದರೆ ಲಾಕ್ ಡೌನ್ ಜಾರಿ ಮಾಡಬೇಕಾಗುತ್ತೆ. ಕಂದಾಯ ಸಚಿವರು ಕೂಡ ಇದನ್ನೇ ಹೇಳಿರುವುದು ಎಂದರು.
ಮಹಾರಾಷ್ಟ್ರ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಬೆಳಗಾವಿ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಬಿಗಿ ಕ್ರಮ ಅನಿವಾರ್ಯ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಬಹುದು. ಆದರೆ ನಮ್ಮ ರಾಜ್ಯದ ಜನರ ಆರೋಗ್ಯ ಮುಖ್ಯವಾಗಿದೆ. ರಾಜ್ಯದ ಜನರ ಹಿತದೃಷ್ಟಿಯಿಂದ ಕಠಿಣ ನಿಯಮ ಜಾರಿ ಮಾಡಲಾಗುವುದು ಎಂದರು.
ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವು-ನೋವು ಉಂಟಾಗಿದೆ. ಈಗ ಮೂರನೇ ಅಲೆ ವೇಳೆ ಮತ್ತೆ ಪರಿಸ್ಥಿತಿ ಬಿಗಡಾಯಿಸಬಾರದು ಎಂಬ ಕಾರಣಕ್ಕೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಆ ನಿಟ್ಟಿನಲ್ಲಿ ಆಸ್ಪತ್ರೆ, ಆಕ್ಸಿಜನ್ ಬೆಡ್, ಆರ್ ಟಿಪಿಸಿ ಆರ್ ಟೆಸ್ಟ್, ವ್ಯಾಕ್ಸಿನ್ ಎಲ್ಲ ನಿಟ್ಟಿನಲ್ಲಿಯೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.