ಬೆಂಗಳೂರು: ರಾಜ್ಯದಲ್ಲಿ ಕಳೆದ 10 ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಈ ನಿಟ್ಟಿನಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಭೇಟಿ ನೀಡಲಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನಾಳೆ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಮಂಗಳೂರು ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ. ಮಳೆಹಾನಿ ಪ್ರದೇಶಗಳನ್ನು ಖುದ್ದು ಪರಿಶೀಲಿಸಿ, ಅಧಿಕಾರಿಗಳ ಜತೆ ಸಭೆ ನಡೆಸುತ್ತೇನೆ. ಸಂಜೆ ಉಡುಪಿಯಲ್ಲಿಯೇ ವಾಸ್ತವ್ಯ ಮಾಡುತ್ತೇನೆ ಎಂದರು.
ನಾಡಿದ್ದು, ಕಾರವಾರ ಜಿಲ್ಲೆಗೆ ಭೇಟಿ ನೀಡಲಿದ್ದು, ಭೂಕುಸಿತ, ಮಳೆ ಹಾನಿಗೊಳಗಾದ ಸಂತ್ರಸ್ತರ ಜತೆ ಮಾತನಾಡಿ, ಅವರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗುವುದು. ಮಳೆ ಹಾನಿ ಕುರಿತಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸೂಕ್ತ ಪರಿಹಾರ ಕಾರ್ಯದ ಬಗ್ಗೆಯೂ ಸೂಚಿಸಲಾಗುವುದು ಎಂದು ಹೇಳಿದರು.