ದಾವಣಗೆರೆ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಾನುವಾರುಗಳ ಚರ್ಮ ಗಂಟು ರೋಗ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಹಲವೆಡೆ ಸಂತೆ, ಜಾತ್ರೆ, ಜಾನುವಾರು ಸಾಗಾಣಿಕೆಗಳನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ದಿನದಿಂದ ದಿನಕ್ಕೆ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಹೆಚ್ಚುತ್ತಿದ್ದು, ಕೋಲಾರ, ದಾವಣಗೆರೆ ಜಿಲ್ಲೆಗಳಲ್ಲಿ ಸಂತೆ, ಜಾತ್ರೆ, ಜಾನುವಾರು ಸಾಗಾಣಿಕೆಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಅಲ್ಲದೇ ಹೊರ ರಾಜ್ಯಗಳಿಂದ ಜಾನುವಾರುಗಳನ್ನು ತರದಂತೆ ಆದೇಶ ನೀಡಲಾಗಿದೆ.
ರೋಗಪೀಡಿತ ಜಾನುವಾರುಗಳ ಬಾಯಿ, ಮೂಗಿನಿಂದ ಸುರಿಯುವ ಲೋಳೆಯಂತಹ ದ್ರವ ಬಿದ್ದ ಸ್ಥಳದಲ್ಲಿ ಬೇರೆ ರಾಸುಗಳು ಆಹಾರ ಸೇವಿಸಿದರೆ ಚರ್ಮ ಗಂಟು ರೋಗ ಹರಡುವ ಸಾಧ್ಯತೆ ಇದೆ. ಇದು ಮನುಷ್ಯನಿಗೆ ಹರಡುವುದಿಲ್ಲ ಎನ್ನಲಾಗಿದೆ. ಜಾನುವಾರುಗಳ ರೋಗ ಪತ್ತೆಗಾಗಿ ಜಿಲ್ಲಾ ಪಶುವೈದ್ಯಕೀಯ ಆಸ್ಪತ್ರೆ ಪ್ರಯೋಗಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮುಂಜಾಗೃತಾ ಕ್ರಮವಾಗಿ ಜಾನುವಾರುಗಳಿಗೆ ಲಸಿಕೆ ಹಾಕಿಸುವಂತೆ ದಾವಣಗೆರೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಆದೇಶ ಹೊರಡಿಸಿದ್ದಾರೆ.