ಹುಬ್ಬಳ್ಳಿ: ಕೇಂದ್ರ ಸರ್ಕಾರದ ಸೇನಾ ನೇಮಕಾತಿ ‘ಅಗ್ನಿಪಥ್’ ಯೋಜನೆ ವಿರುದ್ಧ ದೇಶಾದ್ಯಂತ ಯುವಕರು ಪ್ರತಿಭಟನೆ ತೀವ್ರಗೊಳಿಸಿದ್ದು, ಹಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಈ ನಡುವೆ ಅಗ್ನಿಪಥ್ ಯೋಜನೆ ಕಿಚ್ಚು ರಾಜ್ಯಕ್ಕೂ ವ್ಯಾಪಿಸಿದ್ದು, ಹಲವು ಜಿಲ್ಲೆಗಳಲ್ಲಿ ಸೇನಾಕಾಂಕ್ಷಿ ಯುವಕರು ಹೋರಾಟ ಆರಂಭಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಯುವಕರು ಪ್ರತಿಭಟನೆ ನಡೆಸಿದ್ದಾರೆ. ಅಗ್ನಿಪಥ್ ಯೋಜನೆ ವಿರೋಧಿಸಿ ಹುಬ್ಬಳ್ಳಿಯಲ್ಲಿ ಯುವಕರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಹುಬ್ಬಳ್ಳಿ ಬಸ್ ನಿಲ್ದಾಣದ ಬಳಿ ಯುವಕರು ಪ್ರತಿಭಟನೆ ತೀವ್ರಗೊಳಿಸಿದ್ದು, ಈ ವೇಳೆ ಉದ್ರಿಕ್ತರ ಗುಂಪು ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದೆ. ಬಸ್ ನ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಹಲವರನ್ನು ವಶಕ್ಕೆ ಪಡೆದು ಎಳೆದೊಯ್ದಿದ್ದಾರೆ.
ಇನ್ನೊಂದೆಡೆ ಧಾರವಾಡದಲ್ಲಿ ಯುವಕರು ಪ್ರತಿಭಟನೆ ನಡೆಸಿದ್ದು, ಈ ವೇಳೆ ಕಲಾಭವನ ಮೈದಾನಕ್ಕೆ ತೆರಳಿ ಪ್ರತಿಭಟಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಯುವಕರನ್ನು ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಪಟ್ಟು ಸಡಿಲಿಸದ ಯುವಕರು ಪ್ರತಿಭಟನೆ ಇನ್ನಷ್ಟು ತೀವ್ರಗೊಳಿಸಿದ್ದಾರೆ. ಈ ವೇಳೆ ಪೊಲೀಸರು ಯುವಕರ ಮೇಲೆ ಲಘುಲಾಠಿ ಪ್ರಹಾರ ನಡೆಸಿದ್ದಾರೆ. ಲಾಠಿ ಏಟಿಗೆ ಯುವಕರು ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ.
ಇನ್ನು ಗಡಿ ಜಿಲ್ಲೆ ಬೆಳಗಾವಿಯ ಗೋಕಾಕ್, ಖಾನಾಪುರ, ನಿಪ್ಪಾಣಿಯಲ್ಲಿ ಸೇನಾಕಾಂಕ್ಷಿ ಯುವಕರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾನಾಪುರದಲ್ಲಿ ಸೇನಾ ತರಬೇತಿ ಯುವಕರು ನಡೆದ ಪ್ರತಿಭಟನೆಗೆ ಶಾಸಕ ಅಂಜಲಿ ನಿಂಬಾಳ್ಕರ್ ಸಾಥ್ ನೀಡಿದ್ದು, ಸರ್ಕಾರ ಯೋಜನೆ ಹಿಂಪಡೆದು ಸೇನಾ ನೇಮಕಾತಿಯಲ್ಲಿನ ಅನ್ಯಾಯ ತಡೆಯುವಂತೆ ಆಗ್ರಹಿಸಿದ್ದಾರೆ.