ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದು, ಹಲವೆಡೆ ಸಾರ್ವಜನಿಕರು, ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಆರ್ ಪುರ, ಹೊಯ್ಸಳನಗರ, ಮಹದೇವಪುರ ಸೇರಿದಂತೆ ಹಲವೆಡೆ ಒತ್ತುವರಿ ತೆರವು ಕಾರ್ಯ ಆರಂಭವಾಗಿದ್ದು, ಜೆಸಿಬಿಗಳು ಘರ್ಜಿಸುತ್ತಿವೆ. ನಮ್ಮ ಬಳಿ ದಾಖಲೆಗಳು ಇದ್ದರೂ ಅಧಿಕಾರಿಗಳು ಈಗ ಏಕಾಏಕಿ ಕಟ್ಟಡ, ಮನೆಗಳ ತೆರವಿಗೆ ಮುಂದಾಗುತ್ತಿದ್ದಾರೆ. ಇದು ಸೂಕ್ತ ಕ್ರಮವಲ್ಲ ಎಂದು ಕಿಡಿಕಾರಿದ್ದಾರೆ.
ಹಲವಾರು ವರ್ಷಗಳಿಂದ ಈ ಭಾಗದಲ್ಲಿ ವಾಸವಾಗಿದ್ದೇವೆ. ಈಗ ಅಧಿಕಾರಿಗಳು ಕಟ್ಟಡಗಳಿಗೆ ಮಾರ್ಕ್ ಮಾಡಿ ತೆರವು ಮಾಡುತ್ತಿದ್ದಾರೆ. ನಮ್ಮ ಬಳಿ ದಾಖಲೆಗಳಿವೆ ಎಂದು ಹೇಳಿದರೆ ಅಧಿಕಾರಿಗಳು ಹಳೆ ದಾಖಲೆ ಪರಿಶೀಲಿಸಿ ತೆರವುಗೊಳಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುನೇನಕೊಳವಿನಲ್ಲಿ ರಾಜಕಾಲುವೆಯ ಮೇಲೆ ನಾಲ್ಕೈದು ಅಂತಸ್ಥಿತ ಕಟ್ಟಡ ನಿರ್ಮಿಸಲಾಗಿದೆ. ರಾಜಕಾಲುವೆ ಮೇಲೆಯೇ ಲೇಔಟ್ ಇದ್ದು, ಮಹದೇವಪುರ ವ್ಯಾಪ್ತಿಯಲ್ಲಿ 27 ಕಟ್ಟಡಗಳನ್ನು ತೆರವುಗೊಳಿಸಬೇಕಾದ ಅನಿವಾರ್ಯವಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.