ಬೆಂಗಳೂರು: ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಬಗ್ಗೆ ಮತ್ತೆ ಕಿಡಿ ಕಾರಿರುವ ಕಾಂಗ್ರೆಸ್, ರಾಜ್ಯದ ರೈತರನ್ನು ಮುಳುಗಿಸಿದ್ದು ಮಳೆಯಲ್ಲ, ರಾಜ್ಯ ಸರ್ಕಾರವೇ ಮುಳುಗಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದ ರೈತರನ್ನು ಮಳೆ ಮುಳುಗಿಸಿಲ್ಲ, ಬಿಜೆಪಿ ಸರ್ಕಾರವೇ ಅನ್ಯಾಯವೆಸಗಿ ಮುಳುಗಿಸುತ್ತಿದೆ. ನೆರೆಯಿಂದ ಆದ ಬೆಳೆ ನಷ್ಟವನ್ನು ಇದುವರೆಗೂ ಸರ್ಕಾರ ಸರ್ವೆ ನಡೆಸಿಲ್ಲ, ಪರಿಹಾರವೂ ಘೋಷಿಸಿಲ್ಲ. ನೆರೆಯಿಂದ ಸಂತ್ರಸ್ತರಾದವರಿಗೆ ಕೈಗೊಂಡ ತುರ್ತು ಪರಿಹಾರ ಕ್ರಮಗಳೇನು? ಮೊದಲು ಸರ್ಕಾರ ಹೇಳಲಿ ಎಂದು ಆಗ್ರಹಿಸಿದೆ.
ರಾಜಕೀಯ ಹೇಳಿಕೆ ನೀಡಬೇಕೆಂದರೆ ಎಲ್ಲೆಲ್ಲೋ ಬಿಲದಲ್ಲಿ ಅಡಗಿದ ಸಚಿವರೆಲ್ಲರೂ ಎದ್ದು ಓಡೋಡಿ ಬರುತ್ತಾರೆ, ನೆರೆ ವಿಚಾರ ಬಂದರೆ ಬಿಲ ಸೇರುತ್ತಾರೆ! ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗಳ ನೆರೆ ಹಾನಿಯ ಬಗ್ಗೆ ಕೈಗೊಂಡ ಕ್ರಮಗಳೇನು ಎಂದು ಕೇಳಿದರೆ ಮೌನಕ್ಕೆ ಜಾರುತ್ತಾರೆ. ಇದು ರಾಜ್ಯ ಬಿಜೆಪಿ ಸರ್ಕಾರದ ಕಾರ್ಯವೈಖರಿ ಎಂದು ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.