ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಗಳು ನಿರ್ಣಾಯಕ ಘಟ್ಟ ತಲುಪಿದ್ದು, ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರಿಂದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ವಿವರಣೆ ಕೇಳಿದ್ದಾರೆ. ಯಾವುದೇ ಕ್ಷಣದಲ್ಲಿ ರಾಜ್ಯಪಾಲರು ಬಹುಮತ ಸಾಬೀತುಪಡಿಸುವಂತೆ ಉದ್ದವ್ ಠಾಕ್ರೆ ಅವರಿಗೆ ಸೂಚಿಸುವ ಸಾಧ್ಯತೆಯಿದೆ.
ಈ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ದಿಢೀರ್ ಆಗಿ ದೆಹಲಿಗೆ ದೌಡಾಯಿಸಿದ್ದಾರೆ. ಅಲ್ಲಿ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮುಂದೆ ಕೈಗೊಳ್ಳಬೇಕಾದ ತೀರ್ಮಾನಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರದ ಹಾಲಿ ಸರ್ಕಾರ ಪತನಗೊಳ್ಳುವುದು ಬಹುತೇಕ ಖಚಿತವಾಗಿದ್ದು, ಬಂಡಾಯ ಶಾಸಕರು ಬಿಜೆಪಿಯೊಂದಿಗೆ ಕೈ ಜೋಡಿಸಿ ಹೊಸ ಸರ್ಕಾರ ರಚನೆಗೆ ಉತ್ಸುಕರಾಗಿದ್ದಾರೆ. ಒಂದೊಮ್ಮೆ ರಾಜ್ಯಪಾಲರು ವಿಶ್ವಾಸಮತ ಕೋರಲು ಸೂಚಿಸಿದರೆ ಅದಕ್ಕೂ ಮುನ್ನವೇ ಮುಖ್ಯಮಂತ್ರಿ ಉದ್ದವ್ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.