ವಿಜಯಪುರ: ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಹೊಸ ಮುಖಗಳಿಗೆ ಟಿಕೆಟ್ ನೀಡಿದೆ. ಕರ್ನಾಟಕದ ಭವಿಷ್ಯದ ಹಿತಕ್ಕಾಗಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಬಹುಮತದಿಂದ ಅಧಿಕಾರಕ್ಕೆ ತನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ವಿಜಯಪುರ ಸೈನಿಕ ಶಾಲಾ ಆವರಣದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಕಾಂಗ್ರೆಸ್ ಘೋಷಿಸಿದ್ದ ರೈತರ ಸಾಲ ಮನ್ನಾ ಜಾರಿಗೊಳಿಸಲಿಲ್ಲ, ರೈತರ ಸಾಲ ಮನ್ನಾ ಮಾಡದೇ ಕಾಂಗ್ರೆಸ್ ನಾಯಕರು ತಮ್ಮ ಜೇಬಿಗೆ ಹಣ ಇಳಿಸಿಕೊಂಡರು. ಆದರೆ ರೈತರ ಕಲ್ಯಾಣಕ್ಕಾಗಿ ಬಿಜೆಪಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಡಬಲ್ ಇಂಜಿನ್ ಸರ್ಕಾರದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಕಳಸಾಬಂಡೂರಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ ಅನುದಾನ ಘೋಷಿಸಿದ್ದೇವೆ. ರೇವಣಸಿದ್ದೇಶ್ವರ ಏತನೀರಾವರಿ ಕೆಲಸ ಆರಂಭವಾಗಿದೆ. ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿದ್ದೇವೆ. ಬಿಜೆಪಿ ಸರ್ಕಾರ ಜನಧನ ಖಾತೆ ಮೂಲಕ ಮಹಿಳೆಯರ ಜೀವನವನ್ನೇ ಬದಲಿಸಿದೆ ಎಂದರು.
ಕಾಂಗ್ರೆಸ್ ಸರ್ಕಾರ ಇದ್ದಾಗ ಮಹಿಳೆಯರಿಗಾಗಿ, ಮಹಿಳೆಯರ ಕಲ್ಯಾಣಕ್ಕಾಗಿ ಯಾವೊಂದು ಗಂಭೀರ ಯೋಜನೆಯನ್ನೂ ಜಾರಿಗೆ ತಂದಿಲ್ಲ ಎಂದು ಕಿಡಿ ಕಾರಿದರು. ವಿಜಯಪುರ ಜಿಲ್ಲೆಯಲ್ಲಿ ಹೆದ್ದಾರಿ ಅಭಿವೃದ್ಧಿ, ಹೊಸ ಕೈಗಾರಿಕೆಗಳಿಗೆ ಅವಕಾಶ ನೀಡಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರಿದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ರಾಜಕೀಯ ನಿವೃತ್ತಿ ಹೆಸರಲ್ಲಿ ವೋಟ್ ಕೇಳಲು ಹೊರಟಿದ್ದಾರೆ. ಇದು ಮತ ಕೇಳುವ ರೀತಿಯೇ ಎಂದು ಪ್ರಶ್ನಿಸಿದ್ದಾರೆ.