ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಕೆಲವರಿಂದ ಕೋರ್ಟ್ ನಿಂದ ತಡೆ ತರಲಾಗಿದ್ದು, ಈ ವಿಚಾರ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ.
ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಹೈಕೋರ್ಟ್ ವಿಭಾಗೀಯ ಪೀಠ ಒತ್ತುವರಿ ಬಗ್ಗೆ ಸಿಎಜಿ ವರದಿಯನ್ನು ನೀಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ರಾಜಕಾಲುವೆ ಒತ್ತುವರಿ ತೆರವಿಗೆ ಯಾವುದಾದರೂ ತಡೆಯಾಜ್ಞೆ ಇದೆಯೇ ? ಎಂದು ಪ್ರಶ್ನಿಸಿದೆ. ಅಲ್ಲದೇ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ರೀತಿ ಬಗ್ಗೆಯೂ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ರಸ್ತೆ ಗುಂಡಿಗಳನ್ನು ಕಟ್ಟಡ ತ್ಯಾಜ್ಯ, ಕಲ್ಲುಗಳಿಂದ ಮುಚ್ಚಲಾಗುತ್ತಿದೆ. ಕೆಲವೆಡೆ ಸ್ಥಳೀಯ ನಿವಾಸಿಗಳೇ ಮುಚ್ಚುತ್ತಿದ್ದಾರೆ. ರಸ್ತೆಗುಂಡಿ ಮುಚ್ಚುವ ಪೈಥಾನ್ ಯಂತ್ರದ ಬಗ್ಗೆ ಹೇಳಿದ್ದೀರಿ. ದೇಶದಲ್ಲಿಯೇ ಇದು ಮೊದಲ ಯಂತ್ರ ಎಂದಿದ್ದೀರಿ. ಅದು ಏನು ಕೆಲಸ ಮಾಡುತ್ತಿದೆ ಗೊತ್ತಿಲ್ಲ. ಆ ಕಂಪನಿಯಿಂದ ಕೆಲಸ ಮಾಡಿಸುವುದು ನಿಮ್ಮ ಜವಾಬ್ದಾರಿ ಎಂದು ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.