ಬೆಂಗಳೂರು: ಕೋವಿಡ್ ಟೆಸ್ಟ್ ಗೆ ನಿರಾಕರಿಸಿ, ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವರ್ತನೆ ಸರಿಯಲ್ಲ, ಆರೋಗ್ಯಾಧಿಕಾರಿಗಳಿಗೆ ಬಾಯಿಗೆ ಬಂದಂತೆ ಮಾತನಾಡಿರುವುದು ಖಂಡನೀಯ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಸೂಚಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವೈದ್ಯಾಧಿಕಾರಿ ನಿರಂಜನ್ ಅವರ ವಿರುದ್ಧ ಹರಿಹಾಯ್ದ ಡಿ.ಕೆ. ಶಿವಕುಮಾರ್, ಜನಪ್ರತಿನಿಧಿಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದೀರಾ ? ನೀವು ನಿಮ್ಮ ಆರೋಗ್ಯ ಇಲಾಖೆ ಸಚಿವರಿಗೆ ಹೋಗಿ ಟೆಸ್ಟ್ ಮಾಡಿ, ಬಚ್ಚಾಗಳ ಹತ್ತಿರ ಆಟವಾಡಿ, ನನ್ನ ಬಳಿ ಬಂದು ಅಲ್ಲ ಎಂದು ಗುಡುಗಿದ್ದರು.
ಕೆಪಿಸಿಸಿ ಅಧ್ಯಕ್ಷರ ವರ್ತನೆಗೆ ಕಿಡಿಕಾರಿರುವ ಸಚಿವ ಸುಧಾಕರ್, ರಾಜ್ಯದ ಜನರ ಹಿತ ಬಲಿಕೊಟ್ಟು ಪಾದಯಾತ್ರೆ ನಡೆಸುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆಯ ಜನರನ್ನೂ ಕರೆತಂದು ಪಾದಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಬೇಜವಾಬ್ದಾರಿಗೆ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ನಿಯಮಗಳ ಮೂಲ ಆಶಯ ಹಾಳು ಮಾಡುವ ಕೀರ್ತಿ ಅವರಿಗೆ ಸಲ್ಲುತ್ತೆ. ಜನರಿಗೊಂದು, ರಾಜಕಾರಣಿಗಳಿಗೊಂದು ಕಾನೂನು ಇರಲ್ಲ. ಡಿ.ಕೆ.ಶಿ ವರ್ತನೆಯನ್ನು ರಾಜ್ಯದ ಜನರು ನೋಡುತ್ತಿದ್ದಾರೆ. ಮುಂದೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.