ಮೈಸೂರು: ಮಾಜಿ ಪ್ರಧಾನಿಗಳ ಬಗ್ಗೆ, ದೇಶದ ಹಿರಿಯ ನಾಯಕರ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಕಿಡಿ ಕಾರಿರುವ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಇಂತಹ ಮಾತುಗಳು ರಾಜಕಾರಣಿಗಳಿಗೆ ಶೋಭೆ ತರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, ಭಾರತದ ಅಸ್ಮಿತೆ ನೆಹರು. ಅವರು ಭಾರತದ ಗೌರವದ ಸಂಕೇತ. ಇಂತಹ ನೆಹರು ಬಗ್ಗೆ ನೀವು ಕೀಳಾಗಿ ಮಾತನಾಡುವುದು ತಪ್ಪು. ನೆಹರು ಅಧಿಕಾರ ಅವಧಿಗಿಂತ ಹೆಚ್ಚಿನ ಅವಧಿ ಜೈಲಿನಲ್ಲಿ ಕಳೆದರು. ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿತ್ತು. ನೆಹರು ತಂದೆ ತಮ್ಮ ಇಡೀ ಆಸ್ತಿಯನ್ನೇ ದೇಶಕ್ಕೆ ಬರೆದುಕೊಟ್ಟರು. ಸಿ.ಟಿ. ರವಿ ಏನು ಕೊಟ್ಟಿದ್ದಾರೆ? ಯಾರನ್ನೋ ಮೆಚ್ಚಿಸಲು ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಅವರ ಬಗ್ಗೆ ಸಿ.ಟಿ.ರವಿ ಕೀಳಾಗಿ ಮಾತನಾಡಿರುವುದು ಯಾರೂ ಮೆಚ್ಚುವಂಥದ್ದಲ್ಲ ಎಂದು ಗುಡುಗಿದ್ದಾರೆ.
ವಾಜಪೇಯಿ ಅವರು ನೆಹರು ನಿಧನರಾದಾಗ ಚರಿತ್ರಾರ್ಹ ಭಾಷಣ ಮಾಡಿದರು. ಸಿ.ಟಿ.ರವಿ ಒಮ್ಮೆ ಓದಿಕೊಳ್ಳಬೇಕು. ಇನ್ನು ಪ್ರಿಯಾಂಕ್ ಖರ್ಗೆ ವಾಜಪೇಯಿ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆ ತಮ್ಮ ತಂದೆ ನೋಡಿ ಕಲಿಯಲಿ. ಕರ್ನಾಟಕದಲ್ಲಿ 5 ಜನ ಮಾಜಿ ಸಿಎಂ ಗಳಿದ್ದಾರೆ ಆದರೂ ಯಾಕೆ ಇದನ್ನು ಖಂಡಿಸುತ್ತಿಲ್ಲ. ರಾಜಕಾರಣವನ್ನು ಎಲ್ಲಿಗೆ ತಂದು ನಿಲ್ಲಿಸುತ್ತಿದ್ದೀರಾ? ನಿಮ್ಮ ಪಕ್ಷದ ನಾಯಕರಿಗೆ ಬಾಯಿ ಮುಚ್ಚಿಕೊಂಡಿರಿ ಎಂದು ಹೇಳುವಷ್ಟು ನೈತಿಕತೆ ಕಳೆದುಕೊಂಡಿದ್ದೀರೇ? ಎಂದು ಪ್ರಶ್ನಿಸಿದ್ದಾರೆ.