ಕೈವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿದ್ದು, ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಏಕಾಂಗಿಯಾಗಿದೆ. ಆದಾಗ್ಯೂ ಶರಣಾಗುವ ಪ್ರಶ್ನೆ ಇಲ್ಲ, ಹೋರಾಟ ಮುಂದುವರೆಸುವುದಾಗಿ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸ್ಕಿ ತಿಳಿಸಿದ್ದಾರೆ.
ಉಕ್ರೇನ್ ನ ಬಹುತೇಕ ಭಾಗವನ್ನು ರಷ್ಯಾ ಸೇನೆ ಆವರಿಸಿಕೊಂಡಿದ್ದು, ಮತ್ತೊಂದೆಡೆ ಸೈಬರ್ ಅಟ್ಯಾಕ್ ಮಾಡುವ ಮೂಲಕ ನಿಯಂತ್ರಣ ಸಾಧಿಸಲು ಮುಂದಾಗಿದೆ. ದೈತ್ಯ ರಾಷ್ಟ್ರ ರಷ್ಯಾ ದಾಳಿಗೆ ಪ್ರತಿದಾಳಿ ನಡೆಸಿರುವ ಉಕ್ರೇನ್ ಕೂಡ ರಷ್ಯಾ ವಾಯುನೆಲೆಗಳನ್ನು ಧ್ವಂಸಗೊಳಿಸುತ್ತಿದೆ. ಈ ನಡುವೆ ದೇಶ ರಕ್ಷಣೆಗಾಗಿ ನಾಗರಿಕರಿಗೆ ಕರೆ ಕೊಟ್ಟಿರುವ ಉಕ್ರೇನ್, ರಷ್ಯಾ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರ ಪೂರೈಸಿದೆ.
ಸೇನಾ ಸಂಖ್ಯೆ ಕಡಿಮೆಯಿರುವುದರಿಂದ ರಷ್ಯಾ ವಿರುದ್ಧ ಹೋರಾಡಲು ನಾಗರಿಕರು ಭಾಗಿಯಾಗಬೇಕು ಎಂದು ಉಕ್ರೇನ್ ರಕ್ಷಣಾ ಅಧಿಕಾರಿ ಮನವಿ ಮಾಡಿದ್ದು, ಇದರ ಬೆನ್ನಲ್ಲೇ ಮಿಲಿಟರಿ ಅಧಿಕಾರಿಗಳು ನಾಗರಿಕರ ಕೈಗೆ ಬರೋಬ್ಬರಿ 10,000 ಬಂದೂಕುಗಳನ್ನು ನೀಡಿದ್ದಾರೆ.
ರಷ್ಯಾದ ಯುದ್ಧ ವಿಮಾನಗಳ ಮೇಲೆ ದಾಳಿ ನಡೆಸಿರುವ ಉಕ್ರೇನ್ ಈವರೆಗೆ 7 ವಿಮಾನಗಳನ್ನು ಹೊಡೆದುರುಳಿಸಿದ್ದು, 500ಕ್ಕೂ ಹೆಚ್ಚು ರಷ್ಯಾ ಯೋಧರನ್ನು ಸದೆಬಡಿದಿದೆ.