ಕೈವ್: ಬಲಿಷ್ಠ ರಾಷ್ಟ್ರ ರಷ್ಯಾದ ದಾಳಿಗೆ ಪುಟ್ಟ ರಾಷ್ಟ್ರ ಉಕ್ರೇನ್ ಪ್ರತಿದಾಳಿ ನಡೆಸುತ್ತಿರುವ ರೀತಿ ನಿಜಕ್ಕೂ ಮೆಚ್ಚಲೇಬೇಕು. ರಷ್ಯಾಗೆ ಶರಣಾಗುವ ಪ್ರಶ್ನೆಯೇ ಇಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಘೋಷಿಸಿದ ಬೆನ್ನಲ್ಲೇ ಉಕ್ರೇನ್ ಸೇನೆ ರಷ್ಯಾದ ಮತ್ತೊಂದು ವಿಮಾನವನ್ನು ಹೊಡೆದುರುಳಿಸಿದೆ.
ಲುಹಾನ್ಸಕ್ ಪ್ರದೇಶದಲ್ಲಿ ಉಕ್ರೇನ್ ಸೇನೆ ರಷ್ಯಾದ ಮತ್ತೊಂದು ಯುದ್ಧ ವಿಮಾನವನ್ನು ಛಿದ್ರ ಛಿದ್ರಗೊಳಿಸಿದೆ. ಈ ಮೂಲಕ ಈವರೆಗೆ ರಷ್ಯಾದ 7 ವಿಮಾನಗಳನ್ನು ಹೊಡೆದುರುಳಿಸಿದ್ದು, 2 ಕಾರ್ಗೋ ಶಿಪ್ ಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಉಕ್ರೇನ್ ಸೇನೆ ತಿಳಿಸಿದೆ.
ರಾಷ್ಯಾ ದಾಳಿಗೆ ಉಕ್ರೇನ್ ನ 40 ಯೋಧರು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ. ಉಕ್ರೇನ್ ನ 5 ನಗರಗಳನ್ನು ಟಾರ್ಗೆಟ್ ಮಾಡಿರುವ ರಷ್ಯಾ ಈ ನಡುವೆ ಕೈವ್ ಏರ್ ಪೋರ್ಟ್ ಮೇಲೆ ಬಾಂಬ್ ದಾಳಿ ನಡೆಸಿದೆ. ಉಕ್ರೇನ್ ನಲ್ಲಿ ಕ್ಷಣ ಕ್ಷಣಕ್ಕೂ ಆತಂಕ ಎದುರಾಗಿದ್ದು, ವಿಮಾನ ಹಾರಾಟ, ಬಸ್, ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇನ್ನೊಂದೆಡೆ ಎಟಿಎಂ ಗಳು ಸ್ಥಗಿತಗೊಂಡಿದ್ದು, ಹಣ, ಆಹಾರ, ನೀರಿಗಾಗಿಯೂ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತುರ್ತು ಸುದ್ದಿಗೋಷ್ಠಿ ನಡೆಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾದ 50 ಸೈನಿಕರನ್ನು ಸದೆಬಡಿದಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ರಷ್ಯಾಗೆ ತಲೆಬಾಗುವ ಪ್ರಶ್ನೆಯೇ ಇಲ್ಲ. ರಷ್ಯಾ ವಿರುದ್ಧ ಹೋರಾಡಲು ಬಯಸುವ ಎಲ್ಲರಿಗೂ ಶಸ್ತ್ರಾಸ್ತ್ರ ಪೂರೈಸುವುದಾಗಿ ತಿಳಿಸಿದ್ದಾರೆ.