ರಷ್ಯಾ ಹಾಗೂ ಉಕ್ರೇನ್ ನಡುವಣ ಯುದ್ಧ ಇನ್ನೂ ಮುಗಿದಿಲ್ಲ. ಇದೀಗ ಪುಟ್ಟ ರಾಷ್ಟ್ರ ಉಕ್ರೇನ್ ಅನ್ನು ಸಂಪೂರ್ಣ ನಾಶ ಮಾಡಲು ರಷ್ಯಾ ತಯಾರಿ ಮಾಡಿಕೊಳ್ತಾ ಇದೆ. ಉಕ್ರೇನ್‌ನಲ್ಲಿ ಮಾಸ್ಕೋದ ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿದ್ದು, ಕಲಿನಿನ್‌ಗ್ರಾಡ್‌ನ ಪಶ್ಚಿಮ ಎನ್‌ಕ್ಲೇವ್‌ನಲ್ಲಿ ಯೋಧರು ಸಿಮ್ಯುಲೇಟೆಡ್ ಪರಮಾಣು ಸಾಮರ್ಥ್ಯದ ಕ್ಷಿಪಣಿ ದಾಳಿಗಳನ್ನು ಅಭ್ಯಾಸ ಮಾಡಿದ್ದಾರಂತೆ. ಈ ಬಗ್ಗೆ ರಷ್ಯಾ ಅಧಿಕೃತ ಹೇಳಿಕೆಯನ್ನು ಕೂಡ ನೀಡಿದೆ.
ರಷ್ಯಾ ಹಾಗೂ ಉಕ್ರೇನ್ ಮಧ್ಯೆ ಸಂಘರ್ಷ ಶುರುವಾಗಿ 70 ದಿನಗಳೇ ಕಳೆದಿವೆ. ಎರಡನೇ ವಿಶ್ವ ಯುದ್ಧದ ನಂತರ ಯುರೋಪ್‌ನಲ್ಲಿ ಅತಿ ಹೆಚ್ಚು ಸಾವು ನೋವು ಸಂಭವಿಸಿರೋದು ಇದೇ ಮೊದಲು. ರಷ್ಯಾದ ಯುದ್ಧೋನ್ಮಾದಕ್ಕೆ ಸಾವಿರಾರು ಜನ ಪ್ರಾಣ ತೆತ್ತಿದ್ದಾರೆ. ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
13 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಫೆಬ್ರವರಿಯಲ್ಲೇ ರಷ್ಯಾ ತನ್ನ ಪಡೆಗಳನ್ನು ಉಕ್ರೇನ್‌ಗೆ ರವಾನಿಸಿದೆ. ರಷ್ಯಾ ಪರಮಾಣು ಅಸ್ತ್ರ ಪ್ರಯೋಗಕ್ಕೆ ಸಮರ್ಥವಾಗಿದೆ ಎಂಬ ಸಂದೇಶವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಆಗಾಗ ರವಾನಿಸುತ್ತಲೇ ಇದ್ದಾರೆ. ಪೋಲೆಂಡ್ ಮತ್ತು ಲಿಥುವೇನಿಯಾ ನಡುವೆ ಇರುವ ಬಾಲ್ಟಿಕ್ ಸಮುದ್ರದ ಎನ್‌ಕ್ಲೇವ್‌ನಲ್ಲಿ ರಷ್ಯಾ, ಪರಮಾಣು ಸಾಮರ್ಥ್ಯದ ಇಸ್ಕಾಂಡರ್ ಮೊಬೈಲ್ ಬ್ಯಾಲಿಸ್ಟಿಕ್ ಕ್ಷಿಪಣಿ ವ್ಯವಸ್ಥೆಗಳ “ಎಲೆಕ್ಟ್ರಾನಿಕ್ ಉಡಾವಣೆ” ಗಳನ್ನು ಅಭ್ಯಾಸ ಮಾಡಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ರಷ್ಯಾದ ಪಡೆಗಳು ಏಕ ಮತ್ತು ಬಹು ದಾಳಿಗಳನ್ನು ಅಭ್ಯಾಸ ಮಾಡಿವೆ. ಕ್ಷಿಪಣಿ ವ್ಯವಸ್ಥೆಗಳು, ವಾಯುನೆಲೆಗಳು, ಸಂರಕ್ಷಿತ ಮೂಲಸೌಕರ್ಯಗಳು, ಮಿಲಿಟರಿ ಉಪಕರಣಗಳು ಮತ್ತು ಅಣಕು ಶತ್ರುಗಳ ಕಮಾಂಡ್ ಪೋಸ್ಟ್‌ಗಳ ಲಾಂಚರ್‌ಗಳನ್ನು ಉಡಾಯಿಸುವ ಸಮರಾಭ್ಯಾಸವನ್ನು ರಷ್ಯಾದ ಪಡೆಗಳು ನಡೆಸಿವೆ. ಈ ಡ್ರಿಲ್‌ಗಳಲ್ಲಿ 100 ಕ್ಕೂ ಹೆಚ್ಚು ರಷ್ಯಾದ ಸೈನಿಕರು ಭಾಗವಹಿಸಿದ್ದರು.
ವಿಕಿರಣ ಮತ್ತು ರಾಸಾಯನಿಕ ಮಾಲಿನ್ಯದ ಪರಿಸ್ಥಿತಿಗಳನ್ನು ಯಾವ ರೀತಿ ಎದುರಿಸಬೇಕು ಎಂಬುದನ್ನು ಸಹ ರಷ್ಯಾದ ಪಡೆಗಳು ಕರಗತ ಮಾಡಿಕೊಂಡಿವೆ. ಫೆಬ್ರವರಿ 24 ರಂದು ಪುಟಿನ್ ಉಕ್ರೇನ್‌ಗೆ ಸೈನ್ಯವನ್ನು ಕಳುಹಿಸಿದ ಸ್ವಲ್ಪ ಸಮಯದಲ್ಲೇ ರಷ್ಯಾ ಪರಮಾಣು ದಾಳಿಯ ಎಚ್ಚರಿಕೆ ನೀಡಿತ್ತು. ಇತ್ತೀಚಿನ ದಿನಗಳಲ್ಲಿ ರಷ್ಯಾದ ಟಿವಿ ವಾಹಿನಿ ಕೂಡ ಪರಮಾಣು ಶಸ್ತ್ರಾಸ್ತ್ರಗಳನ್ನು ಸಾರ್ವಜನಿಕರಿಗೆ ಹೆಚ್ಹೆಚ್ಚು ಪರಿಚಯಿಸುವ ಪ್ರಯತ್ನ ಮಾಡುತ್ತಿದೆಯಂತೆ.