ಬೆಳಗಾವಿ: ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರ ಮತ್ತೆ ಚರ್ಚೆಗೆ ಬಂದಿದ್ದು, ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಈ ಬಾರಿ ಸಂಪುಟದಲ್ಲಿ ಮತ್ತೆ ಅವಕಾಶ ಸಿಗುವ ನಿರೀಕ್ಷೆ ಇದೆ ಎಂದು ಸಹೋದರ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಏಪ್ರಿಲ್ ನಲ್ಲಿ ಸಂಪುಟ ವಿಸ್ತರಣೆಯಾಗಬಹುದು ಎಂದು ಹೇಳಲಾಗುತ್ತಿದೆ. ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಕೇಸ್ ಕೂಡ ಮುಕ್ತಾಯದ ಹಂತದಲ್ಲಿದ್ದು, ಈಗಾಗಲೇ ಒಂದು ಹಂತದಲ್ಲಿ ಕ್ಲಿಯರ್ ಕೂಡ ಆಗಿದೆ. ರಮೇಶ್ ವಿರುದ್ಧದ ಪಿಐಎಲ್ ಕೂಡ ಡಿಸ್ ಮಿಸ್ ಆಗಿದೆ. ಹೀಗಾಗಿ ಅವರಿಗೆ ಆದಷ್ಟು ಬೇಗ ಒಳ್ಳೆಯದಾಗಲಿ ಎಂಬುದು ನಮ್ಮ ಆಶಯ ಎಂದರು.
ಸಚಿವ ಸ್ಥಾನಕ್ಕಾಗಿ ವರಿಷ್ಠರ ಜತೆ ನಾವೇನೂ ಮಾತನಾಡಿಲ್ಲ. ಪಂಚರಾಜ್ಯಗಳ ಚುನಾವಣೆ ಬಳಿಕ ನೂತನ ಸಿಎಂ ಆಯ್ಕೆಯಲ್ಲಿ ಅವರು ಬ್ಯುಸಿ ಇದ್ದಾರೆ. ಒಂದು ವೇಳೆ ರಮೇಶ್ ಗೆ ಸಚಿವ ಸ್ಥಾನ ಸಿಕ್ಕರೆ ಬೆಳಗಾವಿ ಜಿಲ್ಲೆಗೆ ಒಳ್ಳೆಯದಾಗಲಿದೆ. ಸಚಿವ ಸ್ಥಾನ ಯಾರಿಗೆ ಕೊಡಬೇಕು ಎಂಬುದು ವರಿಷ್ಠರು ಹಾಗೂ ಸಿಎಂ ಗೆ ಬಿಟ್ಟ ವಿಚಾರ. ಅವರ ನಿರ್ಧಾರಕ್ಕೆ ನಾವು ಬದ್ಧರು. ನೋಡೋಣ ಏನಾಗುತ್ತೆ ಎಂದು ಹೇಳಿದರು.