ಮೈಸೂರು: ಪರೇಶ್ ಮೇಸ್ತಾ ಹತ್ಯೆ ಪ್ರಕರಣದ ಬಗ್ಗೆ ಸಿಬಿಐ ಸಲ್ಲಿಸಿದ ವರದಿ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಶೀಘ್ರದಲ್ಲಿಯೇ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಪರೇಶ್ ಮೇಸ್ತಾನದ್ದು ಕೊಲೆಯಲ್ಲ, ಸಹಜ ಸಾವು ಎಂದು ಸಿಬಿಐ ಸಲ್ಲಿಸಿದ ಬಿ ರಿಪೋರ್ಟ್ ನಿಂದ ಅಂದಿನ ನಮ್ಮ ಸರ್ಕಾರದ ವಿರುದ್ಧ ಬಿಜೆಪಿ ಮಾಡಿದ್ದ ಆರೋಪ ಸುಳ್ಳಾಗಿದೆ. ಸಿಬಿಐ ವರದಿ ರಾಜ್ಯ ಬಿಜೆಪಿ ಸರ್ಕಾರದ ಮುಖಕ್ಕೆ ಬಡಿದ ತಪರಾಕಿ. ಮಾನ ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ ಸುಳ್ಳು ಆರೋಪಕ್ಕೆ ಕ್ಷಮೆಯಾಚಿಸಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು. ಅಲ್ಲದೇ ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ ಮೇಸ್ತಾನಂತಹ ಅಮಾಯಕ ಯುವಕರ ರಕ್ತ ಇದೆ. ಬಿಜೆಪಿ ನಾಯಕರೇ ನೀವು ಅನುಭವಿಸುತ್ತಿರುವ ಅಧಿಕಾರದ ಕುರ್ಚಿಗೆ ಮೇಸ್ತಾನಂತಹ ಯುವಕರ ರಕ್ತದ ಕಲೆ ಅಂಟಿಕೊಂಡಿದೆ ಎಂದು ಕಿಡಿಕಾರಿದ್ದರು.
ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನಲ್ಲಿ ತಿರುಗೇಟು ನೀಡಿರುವ ಸಚಿವೆ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಯಾವಾಗ ಏನು ಹೇಳುತ್ತಾರೆ ಅವರಿಗೆ ಗೊತ್ತಾಗಲ್ಲ. ರಕ್ತದ ಕಲೆ ಅಂಟಿರುವುದು ಅವರ ಕೈಗೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಟಿಪ್ಪು ಜಯಂತಿ ಮಾಡಿ ಗಲಭೆ ಮಾಡಿಸಿದರು ಎಂದು ವಾಗ್ದಾಳಿ ನಡೆಸಿದ್ದಾರೆ.