ದೆಹಲಿ: ಕಾರ್ಯಕ್ರಮವೊಂದರಲ್ಲಿ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಖ್ಯಾತ ಸಂಗೀತಗಾರ ಹಿರ್ದೇಶ್ ಸಿಂಗ್ ಅಲಿಯಾಸ್ ಯೋ ಯೋ ಹನಿ ಸಿಂಗ್ ದೂರು ನೀಡಿದ್ದಾರೆ.
ದಕ್ಷಿಣ ದೆಹಲಿಯ ನೈಟ್ ಕ್ಲಬ್‌ನಲ್ಲಿ ಪ್ರದರ್ಶನ ನೀಡುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಅವರು ಕಿರುಕುಳ, ಅನುಚಿತ ವರ್ತನೆ ಮತ್ತು ಬೆದರಿಕೆ ದೂರು ದಾಖಲಿಸಿದ್ದಾರೆ. ಹನಿ ಸಿಂಗ್ ಅವರು ದೆಹಲಿಯ ಸೌತ್ ಎಕ್ಸ್‌ಟೆನ್ಶನ್ ಪಾರ್ಟ್-2 ರಿಯಾದ ಕ್ಲಬ್‌ನಲ್ಲಿ ಪ್ರದರ್ಶನ ನೀಡುತ್ತಿದ್ದಾಗ, 4-5 ಅಪರಿಚಿತ ವ್ಯಕ್ತಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
38 ವರ್ಷದ ಸಿಂಗ್ ಅವರು ಪ್ರದರ್ಶನ ನೀಡುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಬಲವಂತವಾಗಿ ವೇದಿಕೆಯ ಮೇಲೆ ಹತ್ತಿದ್ದಾರೆ. ಈ ವೇಳೆ ಅನುಚಿತವಾಗಿ ವರ್ತಿಸಿದ್ದು ಮಾತ್ರವಲ್ಲದೆ, ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಅಪರಿಚಿತ ವ್ಯಕ್ತಿಗಳು ಸಿಂಗ್ ರನ್ನು ವೇದಿಕೆ ಮೇಲೆ ತಳ್ಳಿದ್ದಾರೆ. ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಹನಿ ಸಿಂಗ್ ರನ್ನು ಹಿಡಿದು ಎಳೆದಿದ್ದು, ಸವಾಲು ಹಾಕಿ ಬೆದರಿಕೆ ಹಾಕಿದ್ದಾನೆ. ಮತ್ತೊಬ್ಬ ವ್ಯಕ್ತಿ ವಿಡಿಯೋ ಮಾಡುತ್ತಿದ್ದ ಎನ್ನಲಾಗಿದೆ. ಅಪರಿಚಿತರ ಕಾಟಕ್ಕೆ ಹೆದರಿದ ಹನಿ ಸಿಂಗ್ ಮತ್ತು ಅವರ ತಂಡ ತಕ್ಷಣವೇ ವೇದಿಕೆಯನ್ನು ಖಾಲಿ ಮಾಡಿ ಸ್ಥಳದಿಂದ ನಿರ್ಗಮಿಸಿದ್ದಾರೆ. ಈ ಸಂಬಂಧ ದಕ್ಷಿಣ ದೆಹಲಿಯ ಹೌಜ್ ಖಾಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.