ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ (ಬುಲ್ಡೋಜರ್ ಬಾಬಾ) ಅಧಿಕಾರ ಪುನರಾಗಮನದ ನಂತರ, ರಾಜ್ಯದಲ್ಲಿ 50ಕ್ಕೂ ಹೆಚ್ಚು ಅಪರಾಧಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಈ ಸಂಬಂಧ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಸೋಮವಾರ ಮಾಹಿತಿ ನೀಡಿದ್ದಾರೆ.
ಅಧಿಕಾರಿಯ ಪ್ರಕಾರ, ಇಬ್ಬರು ಅಪರಾಧಿಗಳು ಎನ್‌ಕೌಂಟರ್‌ಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಹಾಗೂ ಈ ಅವಧಿಯಲ್ಲಿ ಅನೇಕರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಅನೇಕ ಕ್ರಿಮಿನಲ್‌ಗಳು ತಾನು ಶರಣಾಗುತ್ತಿದ್ದು, ದಯವಿಟ್ಟು ತನ್ನನ್ನು ಶೂಟ್ ಮಾಡಬೇಡಿ, ಎಂಬ ಸಂದೇಶಗಳಿರುವ ಫಲಕಗಳನ್ನು ಕುತ್ತಿಗೆಗೆ ನೇತುಹಾಕಿಕೊಂಡು ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಈ ದೃಶ್ಯದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ಹೆಸರಿನ ಜೊತೆ ಬುಲ್ಡೊಜರ್ ಎಂಬ ಪದ ಥಳುಕು ಹಾಕಿಕೊಂಡಿತ್ತು. ಮಾಫಿಯಾಗಳ ವಿರುದ್ಧ ತಮ್ಮ ಸರ್ಕಾರ ಬುಲ್ಡೋಜರ್ ಅನ್ನು ಬಳಸುತ್ತದೆ ಅಂತಾ ಚುನಾವಣಾ ರ್ಯಾಲಿಯಲ್ಲಿ ಯೋಗಿ ಹೇಳಿಕೆ ನೀಡಿದ್ದರು.
ಇದೀಗ ಮತ್ತೆ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಬಿಜೆಪಿ ಸರಕಾರವೇ ಅಧಿಕಾರಕ್ಕೆ ಬಂದಿರುವುದರಿಂದ ಹೆದರಿದ ಅಪರಾಧಿಗಳು ಪೊಲೀಸರಿಗೆ ಶರಣಾಗುತ್ತಿದ್ದಾರೆ. ನಾಲ್ವರು ಮದ್ಯ ಕಳ್ಳಸಾಗಣೆದಾರರು ದೇವಬಂದ್‌ನಲ್ಲಿ ಶರಣಾಗಿದ್ದಾರೆ ಮತ್ತು ಶಾಮ್ಲಿಯಲ್ಲಿ ಕೂಡ ಹಲವರು ಶರಣಾಗಿದ್ದಾರೆ.
ಕಳೆದ ವಾರ, ರೈಲ್ವೆ ನಿಲ್ದಾಣದ ಬಳಿಯ ಶೌಚಾಲಯದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ನಾಲ್ಕು ದಿನಗಳ ನಂತರ ಆರೋಪಿ ಪ್ರತಾಪ್‌ಗಢದಲ್ಲಿ ಶರಣಾಗಿದ್ದಾನೆ. ಪೊಲೀಸರು ಆತನ ಮನೆ ಮುಂದೆ ಬುಲ್ಡೋಜರ್ ನಿಲ್ಲಿಸಿದ ನಂತರ ಆರೋಪಿ ಶರಣಾಗತನಾಗಿದ್ದಾನೆ.