ಬೆಂಗಳೂರು: ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ನಲಪಾಡ್ ಅಧಿಕಾರ ಸ್ವೀಕರಿಸಿದ್ದು, ರಕ್ಷಾ ರಾಮಯ್ಯ ಅಧಿಕಾರಾವಧಿ ಇಂದಿಗೆ ಮುಕ್ತಾಯಗೊಂಡಿದೆ.
ಸರ್ವಧರ್ಮ ಪ್ರಾರ್ಥನೆಯೊಂದಿಗೆ ರಾಜ್ಯ ಯುವ ಕಾಂಗ್ರೆಸ್ ಕಚೇರಿಯಲ್ಲಿ ನಲಪಾಡ್ ಅಧಿಕಾರ ಸ್ವೀಕರಿಸಿದರು. ಫೆಬ್ರವರಿ 10ರಂದು ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪ್ರತಿಜ್ಞಾ ಸ್ವೀಕಾರ ನಡೆಯಲಿದೆ.
ಅಧಿಕಾರ ಸ್ವೀಕರಿಸಿ ಮಾತನಾಡಿದ ನಲಪಾಡ್, ಒಂದು ವರ್ಷದಿದ ಹಲವು ಗೊಂದಲಗಳಿದ್ದವು, ಇಂದಿನವರೆಗೆ ರಕ್ಷಾ ರಾಮಯ್ಯ ಅವರಿಗೆ ಸಮಯ ನೀಡಲಾಗಿತ್ತು. ಇಂದಿನಿಂದ ನನಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಲಾಗಿದೆ. ಹೈಕಮಾಂಡ್ ನೀಡುವ ಜವಾಬ್ದಾರಿ ನಿರ್ವಹಿಸಲು ನಾನು ಬದ್ಧ ಎಂದರು.
ಇನ್ನು ಬಿ.ವಿ. ಶ್ರೀನಿವಾಸ್ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಕ್ರಿಯಿಸಿದ ನಲಪಾಡ್, ನಾನಾಗಲಿ, ರಕ್ಷಾ ರಾಮಯ್ಯ ಅವರಾಗಲಿ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಏರಲು ಬಿ.ವಿ. ಶ್ರೀನಿವಾಸ್ ಗೆ ಹಣ ನೀಡಿದ್ದೇವೆ ಎಂಬುದು ಸುಳ್ಳು ಆರೋಪ. ಈಗ ಹರಿದಾಡುತ್ತಿರುವ ಪತ್ರದ ಹಿಂದೆ ರಾಜಕೀಯ ಷಡ್ಯಂತ್ರವಿದೆ. ಪತ್ರ ಹರಿಬಿಟ್ಟವರಾರೂ ಯುವ ಕಾಂಗ್ರೆಸ್ ಸದಸ್ಯರಲ್ಲ, ಅವರ ವಿರುದ್ಧ ಕ್ರಮಕ್ಕೆ ಸೂಚಿಸುತ್ತೇನೆ ಎಂದು ಹೇಳಿದರು.