ಕಲಬುರ್ಗಿ: ರಾಜ್ಯದಲ್ಲಿ ಲಂಚ-ಮಂಚದ ಸರ್ಕಾರದ ಕೆಲಸ ನಡೆಯುತ್ತಿದೆ. ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರದ ಸಾಧನೆ ಶೂನ್ಯವಾಗಿದೆ. ಯುವಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಯುವತಿಯರು-ಯುವಕರು ಉದ್ಯೋಗ ಪಡೆಯಬೇಕೆಂದರೆ ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ ಸರಣಿ ಹಗರಣಗಳು ನಡೆಯುತ್ತಿವೆ. ಈಗಾಗಲೇ ಸರ್ಕಾರದ ಇಬ್ಬರು ಸಚಿವರು ರಾಜೀನಾಮೆ ನೀಡಿರುವುದು ಇದೇ ಕಾರಣಕ್ಕೆ. ಕರ್ನಾಟಕದಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ ‘ಯುವತಿಯರಿಗೆ ಉದ್ಯೋಗ ಬೇಕು ಎಂದರೆ ಮಂಚ ಹತ್ತಬೇಕು. ಯುವಕರಿಗೆ ನೌಕರಿ ಬೇಕು ಎಂದರೆ ಲಂಚ ಕೊಡಬೇಕು’ ಎಂಬಂತಾಗಿದೆ. ಇಲ್ಲಿ ಮಂಚ-ಲಂಚದ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಮಿತಿಯಿಲ್ಲದಾಗಿದೆ. ಲಂಚ ಕೊಡದಿದ್ದರೆ ಯಾವ ಕೆಲಸವೂ ಆಗಲ್ಲ. ವಿಧಾನಸೌಧವನ್ನು ಬ್ರೋಕರ್ ಗಳು ವ್ಯಾಪಾರ ಸೌಧ ಮಾಡಿದ್ದಾರೆ. 40% ಕೊಟ್ಟರೆ ವಿಧಾನಸೌಧವನ್ನು ಬೇಕಾದರೂ ಮಾರಿ ಬಿಡುತ್ತಾರೆ. 40% ಸರ್ಕಾರ ಎಂದೇ ಹೆಸರಾಗಿಬಿಟ್ಟಿದೆ. ರಾಜ್ಯ ಬಿಜೆಪಿ ಸರ್ಕಾರ ಅಸಮರ್ಥ ಸರ್ಕಾರ ಎಂಬುದು ಸಾಬೀತಾಗಿದೆ ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.