ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಸಲುವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂದರೆ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲೂ ಜಯಭೇರಿ ಬಾರಿಸಿ ಅಧಿಕಾರ ಹಿಡಿಯಬೇಕೆಂಬುದನ್ನು ಮನಗಂಡಿರುವ ಭಾರತೀಯ ಜನತಾ ಪಕ್ಷ ಇದಕ್ಕಾಗಿ ಭಾರೀ ಪ್ರಯತ್ನ ನಡೆಸಿದೆ.
ಆದರೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೊಂಚಮಟ್ಟಿನ ಹಿನ್ನಡೆಯಾಗಬಹುದೆಂಬ ಮಾಹಿತಿಗಳ ಹಿನ್ನೆಲೆಯಲ್ಲಿ ಬಿಜೆಪಿ ಮತ್ತೊಂದು ಮಾಸ್ಟರ್ ಪ್ಲಾನ್ ರೂಪಿಸಿಕೊಂಡಿದೆ ಎಂದು ಹೇಳಲಾಗಿದೆ. ಒಂದೊಮ್ಮೆ ಅಧಿಕಾರ ಹಿಡಿಯಲು ಸಂಖ್ಯಾಬಲ ಕಡಿಮೆಯಾದರೆ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದೊಂದಿಗೆ ಕೈಜೋಡಿಸುವುದು ಬಿಜೆಪಿ ನಾಯಕರ ಇರಾದೆಯಾಗಿದೆ ಎಂದು ಹೇಳಲಾಗಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿಯವರು ಹೆಚ್ಚಿನ ಗಮನ ಕೇಂದ್ರೀಕರಿಸಿಲ್ಲ. ಅಲ್ಲದೆ ಬಿಜೆಪಿ ಕುರಿತು ಮೃದುಧೋರಣೆ ತಾಳಿರುವ ಅವರು ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದರ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಸಂದರ್ಶನವೊಂದರಲ್ಲಿ ಮಾತನಾಡಿ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ಅತ್ಯುತ್ತಮ ಮತಗಳನ್ನು ಪಡೆಯಲಿದೆ ಎಂದು ಹೇಳಿದ್ದಾರೆ.