ಬೆಳಗಾವಿ: ಯುಗಾದಿ ಹಬ್ಬವನ್ನು ಧಾರ್ಮಿಕ ದಿನವನ್ನಾಗಿ ರಾಜ್ಯ ಸರ್ಕಾರ ಘೋಷಿಸಿದ್ದು ಈ ಹಿನ್ನೆಲೆಯಲ್ಲಿ ಮೊದಲ ಧಾರ್ಮಿಕ ದಿನದ ಕಾರ್ಯಕ್ರಮಕ್ಕೆ ಮುಜರಾಯಿ ಹಾಗೂ ಹಜ್, ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು.
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಶ್ರೀ ವಿರೂಪಾಕ್ಷ ಲಿಂಗ ಸಮಾಧಿ ಮಠದಲ್ಲಿ ಸಾಂಪ್ರದಾಯಿಕ ಪೂಜೆ-ಪುನಸ್ಕಾರದೊಂದಿಗೆ, ಗೋ ಪೂಜೆ, ಲಕ್ಷ್ಮೀ ಪೂಜೆ, ಮಾಡಿ ನೇಗಿಲು ಹೊಡೆದು ಬಿತ್ತನೆ ಮಾಡಿದ ಸಚಿವೆ ಶಶಿಕಲಾ ಜೊಲ್ಲೆ ಯುಗಾದಿ ಗೀತೆ, ವಚನಗಾಯನಗಳನ್ನು ಹಾಡುವ ಮೂಲಕ ಯುಗಾದಿಯನ್ನು ಧಾರ್ಮಿಕ ದಿನವೆಂದು ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ ಅವರು, ಯುಗಾದಿ ಹಬ್ಬವನ್ನು ಇನ್ನು ಮುಂದೆ ಪ್ರತಿವರ್ಷ ಸರ್ಕಾರದ ವತಿಯಿಂದ ಧಾರ್ಮಿಕ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ. ಹಿಂದೂಗಳಿಗೆ ಜನವರಿ 1 ಹೊಸ ವರ್ಷವಲ್ಲ, ಯುಗಾದಿ ಹಬ್ಬದ ದಿನವೇ ಹಿಂದೂಗಳ ಹೊಸ ವರ್ಷ ಆರಂಭವಾಗುತ್ತದೆ. ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಗಳಿಗೆ ನಮ್ಮ ಧಾರ್ಮಿಕ ಆಚರಣೆ ಮಹತ್ವ ತಿಳಿಸಬೇಕಿದೆ ಎಂದು ಹೇಳಿದರು.
ಇದೇ ವೇಳೆ ಹಲಾಲ್ ಕಟ್, ಜಟ್ಕಾ ಕಟ್ ಆಯಾ ದೇವರಿಗೆ ಅರ್ಪಣೆಯಾಗುವ ವಿಷಯ. ಉತ್ತರ ಕರ್ನಾಟಕ ಭಾಗಕ್ಕಿಂತ ಕರಾವಳಿ ಭಾಗದಲ್ಲಿ ಹಲಾಲ್ ಕಟ್ ವಿಷಯ ಜೋರಾಗಿದೆ. ಹಿಂದೂ ಪರ ಸಂಘಟನೆಗಳು ಇದನ್ನು ವಿರೋಧಿಸುವುದು ಸರಿಯೆನಿಸುತ್ತದೆ. ಹಲಾಲ್ ಕಟ್, ಜಟ್ಕಾ ಕಟ್ ಈ ವಿಚಾರ ನನಗೆ ಅಷ್ಟಾಗಿ ಗೊತ್ತಿಲ್ಲ. ಹಾಗಾಗಿ ತಿಳಿದುಕೊಳ್ಳದೇ ಮಾತನಾಡುವುದು ಸಚಿವರಾಗಿ ತಪ್ಪಾಗುತ್ತದೆ ಎಂದು ಹೇಳಿದರು.