ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಚಿವ ವಿ. ಸೋಮಣ್ಣ ವರುಣಾ ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಎರಡು ಕ್ಷೇತ್ರಗಳಲ್ಲೂ ಹಿನ್ನಡೆ ಸಾಧಿಸಿದ್ದಾರೆ.
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸತತ ಹಿನ್ನಡೆ ಕಾಣುತ್ತಿರುವ ಸೋಮಣ್ಣ, ಮತ ಎಣಿಕೆ ಕೇಂದ್ರದಿಂದ ಹೊರ ನಡೆದಿದ್ದು, ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಗೋವಿಂದರಾಜನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸೋಮಣ್ಣ ಅವರನ್ನು ವರುಣಾ ಹಾಗೂ ಚಾಮರಾಜನಗರದಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿದ್ದು, ಒಲ್ಲದ ಮನಸ್ಸಿನಿಂದಲೇ ಅವರು ಕಣಕ್ಕಿಳಿದಿದ್ದರು. ಇದೀಗ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆಯಾಗುತ್ತಿದ್ದು, ಆದರೆ ಇನ್ನು ಹಲವು ಸುತ್ತುಗಳ ಮತ ಎಣಿಕೆ ಇರುವ ಕಾರಣ ಅಂತಿಮ ಫಲಿತಾಂಶ ಹೊರಬೀಳಲು ಒಂದಷ್ಟು ಸಮಯ ಬೇಕಿದೆ.