ಚಿತ್ರದುರ್ಗ: 2023ಕ್ಕೆ ಎರಡೂ ಪಕ್ಷಗಳು ಜೆಡಿಎಸ್ ಮನೆ ಬಾಗಿಲಿಗೆ ಬರಲಿವೆ ಎಂಬ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಶ್ರೀರಾಮುಲು, ಅಂತಹ ಸಂದರ್ಭ ಬಂದರೆ ದೇವೇಗೌಡರನ್ನು ಕೇಳಿದರೆ ತಪ್ಪಿಲ್ಲ ಎಂದು ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಶ್ರೀರಾಮುಲು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಎಂಬ ಸ್ಪಷ್ಟತೆ ಇದೆ. ಹಾಗಾಗಿ ಒಂದೊಮ್ಮೆ ಅಂತಹ ಸಂದರ್ಭ ಬಂದರೆ ದೇವೇಗೌಡರನ್ನು ಕೇಳುವುದರಲ್ಲಿ ತಪ್ಪಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ನಾಯಕರು ಜೆಡಿಎಸ್ ಮನೆ ಬಾಗಿಲಿಗೆ ಹೋಗುವ ಬಗ್ಗೆ ತೀರ್ಮಾನಿಸುತ್ತಾರೆ ಎಂದರು.
ನಗರ ಪಾಲಿಕೆ ಫಲಿತಾಂಶ ಮುಂದಿನ ಚುನಾವಣೆ ದಿಕ್ಸೂಚಿಯಾಗಲಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲ್ಲಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಶ್ರೀರಾಮುಲು, ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ, ಕುಮಾರವ್ಯಾಸರ ಪದ್ಯ ಉಲ್ಲೇಖಿಸಿ ಟೀಕಿಸಿದ್ದಾರೆ. ಆದರೆ ಈ ಪದ್ಯ ನಮಗೆ ಅನ್ವಯವಾಗಲ್ಲ. ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಕಾಂಗ್ರೆಸ್ ಕಾರಣ. ಭಾರತ ಆರ್ಥಿಕವಾಗಿ ಹಿಂದುಳಿಯಲೂ, ನಿರುದ್ಯೋಗ ಸಮಸ್ಯೆ ಎದುರಾಗಲು ಕಾಂಗ್ರೆಸ್ ಕಾರಣ. ಕಾಂಗ್ರೆಸ್ ನಲ್ಲಿ ಭ್ರಷ್ಟರು, ಲೂಟಿಕೋರರು ಇದ್ದಾರೆ. ಮಹಾತ್ಮ ಗಾಂಧೀಜಿ ಕಾಂಗ್ರೆಸ್ ಪಕ್ಷ ವಿಸರ್ಜಿಸಲು ಹೇಳಿದ್ದರು. ದೇಶದಿಂದ ಕಾಂಗ್ರೆಸ್ ತೊಲಗಿಸಿ ಎಂದಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.