ರಾಯಚೂರು: ಬೊಮ್ಮಾಯಿನ ಆರ್ ಎಸ್ ಎಸ್ ಕೈಗೊಂಬೆ ಎನ್ನುತ್ತೀರಾ? ಈ ದೇಶವನ್ನು ಒಗ್ಗೂಡಿಸಿ ಕಟ್ಟಲು ಶ್ರಮಿಸಿದ್ದು ಆರ್ ಎಸ್ ಎಸ್. ದೀನದಲಿತರ ಸೇವೆ ಮಾಡ್ತಿರೋದು ಆರ್ ಎಸ್ ಎಸ್. ಆರ್ ಎಸ್ ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ರಾಯಚೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿಯೂ ಹಗರಣ ನಡೆದಿದೆ. ಹಗಣವನ್ನು ಮುಚ್ಚಿ ಹಾಕಿದ್ದಾರೆ ಎಂದರೆ ಎಲ್ಲಾ ಹಗರಣಗಳ ತನಿಖೆ ಮಾಡಿಸಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಯಾವಾಗ ಏನು ಮಾಡಬೇಕು. ಯಾವ ರೀತಿ ತನಿಖೆ ನಡೆಸಬೇಕು ಎಂಬುದು ನಮಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಸಿದ್ದರಾಮಣ್ಣ ಸಮಾಜವಾದಿ ಹಿನ್ನೆಲೆಯಲ್ಲಿ ಬಂದಿರೋರು. ಕಾಂಗ್ರೆಸ್ ಪಕ್ಷವನ್ನು ಯಾವತ್ತು ಸೇರ್ಪಡೆಯಾದರೋ ಅವತ್ತೇ ಸಮಾಜವಾದಿಯನ್ನು ಮರೆತುಬಿಟ್ಟರು. ಅಂದೇ ಸಮಾಜವಾದಿಯನ್ನು ಮನೆಯಲ್ಲಿ ಮಡಚಿಟ್ರು ಎಂದು ಕಿಡಿಕಾರಿದರು. ನನ್ನನ್ನು ಆರ್ ಎಸ್ ಎಸ್ ಕೈಗೊಂಬೆ ಎಂದು ಹೇಳುತ್ತೀರಾ? ಆರ್ ಎಸ್ ಎಸ್ ಬಗ್ಗೆ ಮಾತನಾಡುವ ಹಕ್ಕು ನಿಮಗಿಲ್ಲ. ಇಡೀ ಭಾರತವನ್ನು ಒಗ್ಗೂಡಿಸಿ ಕಟ್ಟುತ್ತಿರುವುದು ಆರ್ ಎಸ್ ಎಸ್ ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆ ಬಗ್ಗೆಯೂ ಗುಡುಗಿದ ಸಿಎಂ, ಪಾದಯಾತ್ರೆ ವೇಳೆ ಸಣ್ಣ ಹುಡುಗ ಓಡು ಅಂದ್ರೆ ಓಡುತ್ತೀರಿ, ಕುಳಿತುಕೊಳ್ಳಲು ಹೇಳಿದರೆ ಕುಳಿತುಕೊಳ್ಳುತ್ತೀರಿ. ಹಿರಿಯ ನಾಯಕನಾಗಿ ನಿಮಗೆ ಇದೆಲ್ಲ ಸರಿ ಹೊಂದುವುದಿಲ್ಲ. ಸ್ವಲ್ಪನಾದರೂ ಸ್ವಾಭಿಮಾನ ಬೇಕು ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸದೇ ವಾಕ್ಪ್ರಹಾರ ನಡೆಸಿದರು.