ಮೈಸೂರು: ವಿಧಾನಸಭಾ ಚುನಾವಣೆ ಅಖಾಡ ಕ್ಷಣ ಕ್ಷಣಕ್ಕೂ ರಂಗೇರುತ್ತಿದ್ದು, ಆಡಳಿತ ಹಾಗೂ ವಿಪಕ್ಷ ನಾಯಕರು ಮತದಾರರ ಓಲೈಕೆಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಈ ನಡುವೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಲ್ಲಿ ತಾವೇ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೋಲಾರಕ್ಕೆ ಬಿಜೆಪಿಯ ಯಾರೇ ಬಂದು ಪ್ರಚಾರ ಮಾಡಿದರೂ ಚುನಾವಣೆಯಲ್ಲಿ ನಾನೇ ಗೆಲ್ಲುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾದಾಮಿಯಲ್ಲಿಯೂ ನನ್ನನ್ನು ಸೋಲಿಸಲು ಅಮಿತ್ ಶಾ ಬಂದಿದ್ದರು. ಅಶೋಕ್ ಪಟ್ಟಣಶೆಟ್ಟಿ ಬದಲು ಶ್ರೀರಾಮುಲುವನ್ನು ಕಣಕ್ಕಿಳಿಸಿದರು. ಆದರೂ ಬಿಜೆಪಿಗೆ ನನ್ನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಬಾದಾಮಿ ಕ್ಷೇತ್ರದಲ್ಲಿ ಎರಡು ದಿನಗಳ ಕಾಲವಷ್ಟೇ ಪ್ರವಾಸ ಮಾಡಿದ್ದೆ. ಅಲ್ಲಿನ ಜನರು ನನ್ನನ್ನು ಗೆಲ್ಲಿಸಿದ್ದರು ಎಂದು ಹೇಳಿದರು.
ಬಾದಾಮಿ ದೂರ ಎಂಬ ಕಾರಣಕ್ಕೆ ಅಲ್ಲಿಂದ ಸ್ಪರ್ಧಿಸುತ್ತಿಲ್ಲ. ಅಲ್ಲಿನ ಜನ ಹೆಲಿಕಾಪ್ಟರ್ ಕೊಡುತ್ತೇವೆ ಎಂದಿದ್ದಾರೆ. ಎಲ್ಲದಕ್ಕೂ ಹತ್ತಿರ ಎಂಬ ಕಾರಣಕ್ಕೆ ಕೋಲಾರದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದರು.