ಹುಬ್ಬಳ್ಳಿ: ಸ್ವಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಯತ್ನಾಳ್ ಬಿಜೆಪಿ ಕೋರ್ ಕಮಿಟಿಯಲ್ಲಿಲ್ಲ ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅರುಣ್ ಸಿಂಗ್, ಯತ್ನಾಳ್ ಕೋರ್ ಕಮಿಟಿಯಲ್ಲಿಲ್ಲ. ಹಾಗಾಗಿ ಅವರ ಹೇಳಿಕೆಗಳು ಪಕ್ಷದ ಹೇಳಿಕೆಯೂ ಅಲ್ಲ, ಪಕ್ಷದ ಅಭಿಪ್ರಾಯವೂ ಅಲ್ಲ. ಯತ್ನಾಳ್ ಗೆ ನೊಟೀಸ್ ಜಾರಿ ಮಾಡಿ ಉತ್ತರ ಪಡೆದಿದ್ದೇವೆ. ಅವರ ಸ್ವಭಾವವೇ ಹಾಗೇ. ಮುಂದಿನ ದಿನಗಳಲ್ಲಿ ಕ್ರಮದ ಬಗ್ಗೆ ನೋಡೋಣ ಎಂದರು.
ಇದೇ ವೇಳೆ ಭಾರತ್ ಜೋಡೋ ಯಾತ್ರೆ ಬಗ್ಗೆ ವ್ಯಂಗ್ಯವಾಡಿದ ಅರುಣ್ ಸಿಂಗ್, ರಾಹುಲ್ ಗಾಂಧಿ ನಡೆಸುತ್ತಿರುವುದು ಭಾರತ್ ಜೋಡೋ ಅಲ್ಲ, ಕಾಂಗ್ರೆಸ್ ನಾಯಕ ಜೋಡೋ ಯಾತ್ರೆ. ಪಾದಯಾತ್ರೆಯುದ್ಧಕ್ಕೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಜೋಡಿಸುವುದೇ ಆಗಿದೆ ಎಂದು ಹೇಳಿದರು.
ರಾಹುಲ್ ಗಾಂಧಿ, ಡಿ.ಕೆ.ಶಿ ಸಿದ್ದರಾಮಯ್ಯ ಅವರನ್ನು ಒಗ್ಗೂಡಿಸುವ ಯತ್ನ ನಡೆಸುತ್ತಿದ್ದಾರೆ. ಆದರೆ ಅವರಿಬ್ಬರೂ ಕಿತ್ತಾಟ ನಡೆಸಿದ್ದಾರೆ. ಹಾಗಾಗಿ 5 ನಿಮಿಷವೂ ಒಗ್ಗಟ್ಟಿನಿಂದಿರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಭಾರತ್ ಜೋಡೋ ಯಾತ್ರೆ ಪ್ಲಾಪ್ ಆಗಿದೆ ಎಂದರು.