ತುಮಕೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಿಂದೂ ಅಲ್ಲ. ವೀರಶೈವ ಲಿಂಗಾಯಿತ ಎಂಬುದು ಹಿಂದೂ ದರ್ಮವಲ್ಲ ಪ್ರತ್ಯೇಕ ಧರ್ಮ ಎಂದು ಹೇಳುವ ಮೂಲಕ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಸಿ ಸಾಗರಹಳ್ಳಿ ನಟರಾಜ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಗರಹಳ್ಳಿ ನಟರಾಜ್, ಯಡಿಯೂರಪ್ಪ ಹಿಂದೂ ಅಲ್ಲ. ಅವರು ವೀರಶೈವ ಲಿಂಗಾಯಿತ. ನಾನು ಹಿಂದೂ ಅಲ್ಲ ಎಂದು ಹೇಳುವುದು ಬಿಡುವುದು ಅವರ ವೈಯಕ್ತಿಕ ವಿಚಾರ ಎಂದರು.
ವೀರಶೈವ ಲಿಂಗಾಯಿತ ಎಂಬುದು ಪ್ರತ್ಯೇಕ ಧರ್ಮ. ಹಿಂದೂ ಧರ್ಮಕ್ಕೂ ನಮ್ಮ ಆಚರಣೆಗೂ ತುಂಬಾ ವ್ಯತ್ಯಾಸಗಳಿವೆ. ಹೇಗೆ ಬೌದ್ಧ, ಸಿಖ್ ಅಂತ ಧರ್ಮಗಳಿವೆಯೋ ಹಾಗೇ ನಮ್ಮದೂ ಪ್ರತ್ಯೇಕ ಧರ್ಮ. ನಮ್ಮಲ್ಲಿ 106 ಉಪ ಪಂಗಡಗಳಿವೆ. ಅವರೆಲ್ಲರೂ ವೀರಶೈವ ಲಿಂಗಾಯಿತರು. ಯಾರು ಲಿಂಗಧಾರಣೆ ಮಾಡುತ್ತಾರೋ ಅವರೆಲ್ಲರೂ ಲಿಂಗಾಯಿತರು ಎಂದು ಹೇಳಿದರು.
ನಮ್ಮಲ್ಲಿಯೂ ಕೆಲ ಆಚರಣೆಗಳು ವಿಭಿನ್ನವಾಗಿವೆ. ಕೆಲವರಿಗೆ ವಿಭೂತಿ ಧರಿಸುವುದು ಇಷ್ಟವಾಗದಿರಬಹುದು. ಇನ್ನು ಕೆಲವರಿಗೆ ರುದ್ರಾಕ್ಷಿ ಧರಿಸೋದು ಇಷ್ಟ ಇಲ್ಲದಿರಬಹುದು. ನಾವೂ ಕೂಡ ಹಿಂದೂ ಧರ್ಮದಲ್ಲಿನ ಎಲ್ಲಾ ಹಬ್ಬ ಆಚರಣೆ ಮಾಡುತ್ತೇವೆ. ಆದರೆ ನಮ್ಮ ಆಚರಣೆ, ಶಾಸ್ತ್ರ, ಸಂಸ್ಕೃತಿ ಬೇರೆ ನಾವು ಹಿಂದೂಗಳಲ್ಲ. ನಮಗೆ ಪ್ರತ್ಯೇಕ ಧರ್ಮ ಕೊಡಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದರು.