ವಿಜಯಪುರ; ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ, ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ಆರಂಭಿಸಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಪ್ರವಾಸಕ್ಕೆ ಸಿದ್ಧತೆ ನಡೆದಿದೆ. ಆದರೆ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಸ್ವಪಕ್ಷದ ಶಾಸಕರೇ ಅಪಸ್ವರವೆತ್ತಿದ್ದಾರೆ.
ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿ ಸ್ವಂತಬಲದಿಂದ 180 ಸೀಟು ಗೆದ್ದುಕೊಡುವುದಾದರೆ ರಾಜ್ಯ ಪ್ರವಾಸ ಮಾಡಲಿ. ರಾಜ್ಯ ಪ್ರವಾಸಕ್ಕೆ ನಮಗೆ ಕರೆದರೆ ನಾವು ಹೋಗುತ್ತೇವೆ. ಆದರೆ ನಮಗೆ ಕರೆಯದೆಯೇ ತಾವೇ 180 ಸೀಟು ಗೆಲ್ಲುತ್ತೇವೆ ಎನ್ನುವುದಾದರೆ ಅವರೇ ಪ್ರವಾಸ ಮಾಡಿಕೊಳ್ಳಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಬಗ್ಗೆ ಕಿಡಿಕಾರಿರುವ ಯತ್ನಾಳ್, ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಅನುಕೂಲವಾಗಿದೆ. ಕಾಂಗ್ರೆಸ್ ಬಣ್ಣ ಬಯಲಾಗಿದೆ. ಪ್ರಧಾನಿ ಮೋದಿ ಈ ಹಿಂದೆ ಹೇಳಿದ್ದರು. ಭ್ರಷ್ಟರನ್ನು ರಸ್ತೆಗೆ ತರುತ್ತೇನೆ ಎಂದು. ಈಗ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ರಸ್ತೆಗೆ ಇಳಿದಿದ್ದಾರೆ. ರೋಡಲ್ಲಿ ಕುಣಿಯುತ್ತಿದ್ದಾರೆ, ಓಡುತ್ತಿದ್ದಾರೆ……ಹುಚ್ಚು ಹಿಡಿದಂಗಾಗಿದೆ ಅವರಿಗೆ.….ಮೋದಿಯವರ ಉತ್ತಮ ಆಡಳಿತ ನೋಡಲಾಗದೇ ಕಾಂಗ್ರೆಸ್ ನವರು ರಸ್ತೆ ಮೇಲೆ ಡಾನ್ಸ್ ಮಾಡುತ್ತಿದ್ದಾರೆ. ಪಾಪ ಸಿದ್ದರಾಮಯ್ಯ ರಸ್ತೆ ಮೇಲೆ ಓಡುತ್ತಿದ್ದಾರೆ. ಬಿಜೆಪಿಯದ್ದು ದೊಡ್ಡ ಸಾಧನೆಯಲ್ಲದೇ ಇರಬಹುದು ಆದರೆ ಭ್ರಷ್ಟರನ್ನು ರಸ್ತೆಗೆ ತಂದಿದ್ದೇವೆ ಅದು ದೊಡ್ದ ಸಾಧನೆ ಎಂದು ಹೇಳಿದ್ದಾರೆ.