ರಾಯಚೂರು: ಪ್ರಧಾನಿ ಮೋದಿಯವರು ಮಾತೆತ್ತಿದರೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ. ಮೋದಿಯವರೆ ರಾಜ್ಯದಲ್ಲಿ ಮುಸ್ಲಿಂರಿಗೆ ಟಿಕೆಟ್ ಕೊಟ್ಟಿದ್ದೀರಾ? ಬಳ್ಳಾರಿಯಲ್ಲಿ ಒಬ್ಬನೇ ಒಬ್ಬ ಲಿಂಗಾಯಿತರಿಗೆ ಟಿಕೆಟ್ ಕೊಟ್ರಾ? ಹಾಗಾದರೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಹೇಗಾಗುತ್ತೆ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರಾಯಚೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪನವರನ್ನು ಸಿಎಂ ಕುರ್ಚಿಯಿಂದ ಇಳಿಸಿದ್ರು, ಅವರನ್ನು ಗೊಳೋ ಅಂತ ಅಳಿಸಿದ್ರು, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಯವರಿಗೆ ಟಿಕೆಟ್ ಕೊಡದೇ ಆಚೆ ಹಾಕಿದ್ರು ಈಗ ಲಿಂಗಾಯಿತ ವಾರಸ್ದಾರರಂತೆ ಮಾತಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.
ಬಳ್ಳಾರಿಯಲ್ಲಿ ಒಬ್ಬನೇ ಒಬ್ಬ ಲಿಂಗಾಯಿತ ಸಮುದಾಯದವರಿಗೆ ಟಿಕೆಟ್ ಕೊಟ್ಟಿಲ್ಲ, ರಾಜ್ಯದಲ್ಲಿ ಬಿಜೆಪಿಯವರು ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದಾರಾ? ಇಲ್ಲ, ನಾನು ಸಿಎಂ ಬೊಮ್ಮಾಯಿ ಅತಿ ಭ್ರಷ್ಟ ಎಂದು ಹೇಳಿದರೆ ನನ್ನ ಮಾತನ್ನು ತಿರುಚಿ ಲಿಂಗಾಯಿತ ಸಮುದಾಯವೇ ಭ್ರಷ್ಟ ಎಂದಿದ್ದೇನೆ ಎಂದು ಅಪಪ್ರಚಾರ ಮಾಡಿದರು. ಎಲ್ಲಪ್ಪ ಬಸವರಾಜ, ನಿಮ್ಮ ಸಬ್ ಕಾ ಸಾಥ್, ಸಬ್ ಕಾ ವಿಕಾಸ್? ನಿಮ್ಮಿಂದ ನಾವು ಪಾಠ ಕಲಿಬೇಕಾ? ಎಂದು ಗುಡುಗಿದ್ದಾರೆ
ಪ್ರಧಾನಿ ಮೋದಿಯವರು ರಾಜ್ಯದಲ್ಲಿ ಪ್ರವಾಹ ಬಂದಾಗ ಬರಲಿಲ್ಲ, 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದರು ಒಂದೇ ಒಂದು ಉದ್ಯೋಗ ಸೃಷ್ಟಿಸಿಲ್ಲ. ಬರಿ ಸುಳ್ಳು ಹೇಳುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಈಗ ಮತ ಕೇಳಲು ಬಿಜೆಪಿಯ ಕೇಂದ್ರ ನಾಯಕರು ರಾಜ್ಯಕ್ಕೆ ಸಾಲು ಸಾಲಾಗಿ ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.