ನವದೆಹಲಿ: ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇಡಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿರುವುದಾಗಿ ತಿಳಿಸಿದ್ದಾರೆ.
ಇಡಿ ವಿಚಾರಣೆ ಬಳಿಕ ನವದೆಹಲಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಯಂಗ್ ಇಂಡಿಯಾ ಪ್ರಕರಣದ ಬಗ್ಗೆ ಮಾಹಿತಿ ಕೇಳಿದರು. ಇಡಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಗ್ಗೆ ಯಾವುದೇ ಪ್ರಶ್ನೆ ಕೇಳಿಲ್ಲ ಎಂದರು.
ಯಂಗ್ ಇಂಡಿಯಾ ಸಂಸ್ಥೆಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದೆ. ಈ ದೇಣಿಗೆ ಬಗ್ಗೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದರು. ನಮ್ಮ ಕಂಪನಿಗಳಿಗೆ ಸೇರಿದ ಮತ್ತಷ್ಟು ದಾಖಲೆ ನೀಡುವಂತೆ ಕೇಳಿದ್ದಾರೆ. ದಾಖಲೆ ಸಲ್ಲಿಸಲು ಕಾಲಾವಕಾಶ ಕೇಳಿದ್ದೇನೆ. ಇದಕ್ಕೆ ಇಡಿ ಅಧಿಕಾರಿಗಳು ಒಪ್ಪಿದ್ದಾರೆ. ಅಲ್ಲದೇ ದಾಖಲೆಗಳನ್ನು ಆನ್ ಲೈನ್ ನಲ್ಲಿ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಹೇಳಿದರು.