ಬೆಂಗಳೂರು: 2023ರ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸೀಟ್ ಗಳನ್ನು ಗೆಲ್ಲಲಿದೆ. ನಮ್ಮ ಕಾರ್ಯಕರ್ತರು 4 ತಿಂಗಳು ಪರಿಶ್ರಮ ಹಾಕಿದರೆ ಕರ್ನಾಟಕದ ಜನರು 5 ವರ್ಷಗಳ ಕಾಲ ನೆಮ್ಮದಿಯಿಂದ ಇರಬಹುದು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಪ್ರಕೋಷ್ಠಗಳ ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ, ಯಂಕ, ನಾಣಿ, ಸೀನ ಎಲ್ಲಾ ನಾನೇ ಸಿಎಂ ಅಂತಿದ್ದಾರೆ. ಕಾಂಗ್ರೆಸ್ ನವರು ಮುಖ್ಯಮಂತ್ರಿಯಾಗಲು ತಿರುಕನ ಕನಸು ಕಾಣುತ್ತಿದ್ದಾರೆ. ಮೂರು ತಲೆಮಾರಿಗಾಗುವಷ್ಟು ಆಸ್ತಿ ಮಾಡಿದ್ದೇನೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ. ಇದರಿಂದ ಅಧಿಕಾರದಲ್ಲಿದ್ದಾಗ ಅವರು ಲೂಟಿ ಮಾಡಿದ್ದರು ಎಂಬುದು ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಶ್ರಮ ಹಾಕಬೇಕು. ಇತ್ತೀಚಿನ ಸರ್ವೆ ಪ್ರಕಾರ ಶೇ.70ರಷ್ಟು ಜನ ಮೋದಿ ಪರ ಇದ್ದಾರೆ. ಕಾರ್ಯಕರ್ತರು ಇನ್ನಷ್ಟು ಶ್ರಮ ವಹಿಸಬೇಕಿದೆ ಎಂದರು. 2 ಸ್ಥಾನ ಕೂಡ ಇಲ್ಲದ ಸಂದರ್ಭದಲ್ಲಿ ಬಿಜೆಪಿ ಕಟ್ಟುವ ಕೆಲಸ ಮಾಡಿದ್ದೇವೆ. ಪಕ್ಷದ ಮಹಿಳಾ ಸಂಘಟನೆ ಇನ್ನಷ್ಟು ಬಲಗೊಳ್ಳಬೇಕು. ವಿಪಕ್ಷಗಳ ಚಟುವಟಿಕೆಗಳ ಮೇಲೆ ಕಣ್ಣಿಡಬೇಕು. ಈ ಬಾರಿ ಕಾಂಗ್ರೆಸ್ ಸೋಲಿಸಿದರೆ ದೇಶದಲ್ಲಿಯೇ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಹೇಳಿದರು.