ರಾಮನಗರ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನ ಹಿತಕ್ಕಾಗಿ ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತಿದ್ದೇವೆ. ಆದರೆ ಇಲ್ಲಿಂದಲೇ ಮತ್ತೆ ಪಾದಯಾತ್ರೆ ಪುನರಾರಂಭಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಮೂರು ದಿನ ಮೌನ ಎಂದಿದ್ದೆ. ಆದರೆ ಈಗ ಮೌನ ಮುರಿಯುವ ಸ್ಥಿತಿ ಬಂದಿದೆ. ಕೊರೊನಾ ಕಾರಣದಿಂದಾಗಿ ಪಾದಯಾತ್ರೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸುತ್ತಿದ್ದೇವೆ. ಕೊರೊನಾ ಸೋಂಕಿತ ಡಿಸಿ ನೋಟೀಸ್ ನೀಡಲು ಬಂದಿದ್ದರು. ರಾಮನಗರ ಎಸಿ, ಡಿವೈಎಸ್ ಪಿ ನೋಟೀಸ್ ನೀಡಲು ಆಗಮಿಸಿದ್ದರು. ಸೋಂಕಿತರ ಸಹಿಯಿರುವುದರಿಂದ ನೋಟೀಸ್ ಸ್ವೀಕರಿಸಲಿಲ್ಲ ಎಂದರು.
ಹೋರಾಟದ ವೇಳೆ ಜನರಿಗೆ ಸಮಸ್ಯೆಯಾಗಬಾರದು. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಪಾದಯಾತ್ರೆ ಸಾಗುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ರಸ್ತೆ ಬದಿ ನಡೆಯುವಂತೆ ನೋಟೀಸ್ ನಲ್ಲಿ ಉಲ್ಲೇಖವಾಗಿದ್ದ ಅಂಶಗಳ ಬಗ್ಗೆ ಡಿಸಿ ಮಾಹಿತಿ ನೀಡಿದ್ದರು. ಆದರೆ ರಾಜ್ಯದಲ್ಲಿ ಕೋವಿಡ್ ಕೇಸ್ ಹೆಚ್ಚುತ್ತಿರುವುದರಿಂದ ಈ ಸಂದರ್ಭದಲ್ಲಿ ಪಾದಯಾತ್ರೆ ಮುಂದುವರೆಸುವುದು ಸೂಕ್ತವಲ್ಲ ಎಂದು ತಾತ್ಕಾಲಿಕ ಸ್ಥಗಿತ ಮಾಡುತ್ತಿದ್ದೇವೆ. ಆದರೆ ಪಾದಯಾತ್ರೆ ನಿಲ್ಲಿಸುತ್ತಿಲ್ಲ. ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ ಅಷ್ಟೇ. ಕೋವಿಡ್ ನಿಯಮ ಸಡಿಲಗೊಳ್ಳುತ್ತಿದ್ದಂತೆ ರಾಮನಗರದಿಂದಲೇ ಮತ್ತೆ ಪಾದಯಾತ್ರೆ ಆರಂಭವಾಗಲಿದೆ. ಇನ್ನಷ್ಟು ಉತ್ಸಾಹದಿಂದ ಪಾದಯಾತ್ರೆ ಮುಂದುವರೆಯಲಿದೆ ಎಂದು ತಿಳಿಸಿದರು.