ಸಬರಮತಿ: ಗುಜರಾತ್ನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದು 134 ಜನರು ಮೃತಪಟ್ಟಿರುವುದಕ್ಕೆ ಒಂದೇ ಸಲ ಅಧಿಕ ಜನ ಪ್ರಯಾಣಿಸಿದ್ದೂ ಕಾರಣ ಇರಬಹುದು ಎಂಬ ಹಿನ್ನೆಲೆಯಲ್ಲಿ ಅಹಮದಾಬಾದ್ ನಗರಸಭೆಯು ಇಲ್ಲಿಯ ಸಬರಮತಿ ನದಿಯ ಮೇಲಿನ ಅಟಲ್ ಸೇತುವೆಯಲ್ಲಿ ಓಡಾಡುವವರ ಸಂಖ್ಯೆಯನ್ನು ಸೀಮಿತಗೊಳಿಸಲು ನಿರ್ಧರಿಸಿದೆ.
300 ಮೀಟರ್ ಉದ್ದ ಮತ್ತು 14 ಮೀಟರ್ ಅಗಲದ ಅಟಲ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 27 ರಂದು ಉದ್ಘಾಟಿಸಿದ್ದರು. ಇದರಲ್ಲಿ ಅಧಿಕ ಮಂದಿ ಪ್ರಯಾಣಿಸುತ್ತಿದ್ದು, ಮೊರ್ಬಿ ಸೇತುವೆ ದುರಂತದ ಬಳಿಕ ಇದರ ಪ್ರಯಾಣದ ಮಿತಿಯನ್ನು ಪ್ರತಿ ಗಂಟೆಗೆ 3 ಸಾವಿರಕ್ಕೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಜನರ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತೆ ವಹಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಬರಮತಿ ನದಿಯ ಪಶ್ಚಿಮ ತುದಿಯಲ್ಲಿರುವ ಹೂವಿನ ಉದ್ಯಾನವನ್ನು ಮತ್ತು ಪೂರ್ವ ತುದಿಯಲ್ಲಿರುವ ಕಲೆ ಮತ್ತು ಸಂಸ್ಕೃತಿ ಕೇಂದ್ರವನ್ನು ಸಂಪರ್ಕಿಸುತ್ತದೆ. ಈ ಸೇತುವೆಯು ಸುಮಾರು 12,000 ಜನರ ತೂಕವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಮೊರ್ಬಿ ಸೇತುವೆ ದುರಂತವನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆಯಾಗಿ ಜನರ ಸಂಖ್ಯೆಯನ್ನು ಮಿತಿಗೊಳಿಸಲು ನಿರ್ಧರಿಸಿದೆ.