alex Certify Big News: ಮೊಬೈಲ್‌, ಲ್ಯಾಪ್ಟಾಪ್‌ನಂತಹ ಗೆಜೆಟ್‌ ರಿಪೇರಿಗೆ ಹೊಸ ಯೋಜನೆ, ಪರಿಸರ ಕಾಳಜಿಗಾಗಿಯೇ ಬರ್ತಿದೆ ʼದುರಸ್ತಿ ಹಕ್ಕುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಮೊಬೈಲ್‌, ಲ್ಯಾಪ್ಟಾಪ್‌ನಂತಹ ಗೆಜೆಟ್‌ ರಿಪೇರಿಗೆ ಹೊಸ ಯೋಜನೆ, ಪರಿಸರ ಕಾಳಜಿಗಾಗಿಯೇ ಬರ್ತಿದೆ ʼದುರಸ್ತಿ ಹಕ್ಕುʼ

ನಿಮ್ಮ ಮೊಬೈಲ್ ಫೋನ್, ಟ್ಯಾಬ್, ಲ್ಯಾಪ್ಟಾಪ್‌ ಮತ್ತಿತರ ಗೆಜೆಟ್‌ಗಳು ಹಾಳಾದಾಗ ಅಥವಾ ಕಾರ್ಯನಿರ್ವಹಿಸದೇ ಇದ್ದಾಗ ಅದಕ್ಕಾಗಿ ನೀವು ಹಣ ಖರ್ಚು ಮಾಡಬೇಕಾಗಿಲ್ಲ. ಹೊಸದನ್ನು ತೆಗೆದುಕೊಳ್ಳಲು ಹಣ ಖರ್ಚು ಮಾಡುವ ಬದಲು ಸರ್ಕಾರವೇ ಜಾರಿ ಮಾಡ್ತಿರೋ ‘ದುರಸ್ತಿ ಹಕ್ಕು’ ಎಂಬ ಯೋಜನೆಯ ಲಾಭ ಪಡೆದುಕೊಳ್ಳಿ. ಈ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಎಲೆಕ್ಟ್ರಾನಿಕ್‌ ಉಪಕರಣಗಳು ಆಗಾಗ ಕೆಟ್ಟು ಹೋಗುವುದು ಸಾಮಾನ್ಯ. ಇದನ್ನು ದುರಸ್ತಿ ಮಾಡಲು ಸಾಕಷ್ಟು ಹಣ ಖರ್ಚಾಗುತ್ತದೆ. ಆಗ ಬಳಕೆದಾರರು ಹಳೆಯದನ್ನು ಬಿಸಾಡಿ ಹೊಸದನ್ನು ಖರೀದಿ ಮಾಡುತ್ತಾರೆ. ಇದಕ್ಕೂ ಸಾಕಷ್ಟು ಹಣವನ್ನು ವೆಚ್ಚ ಮಾಡಬೇಕಾಗಿ ಬರುತ್ತದೆ.

ಕೇವಲ ಮೊಬೈಲ್‌ ಅಥವಾ ಲ್ಯಾಪ್ಟಾಪ್‌ ಅಲ್ಲ ಬದಲಾಗಿ ಗ್ರಾಹಕರ ಕೈಗಳನ್ನು ಬಲಪಡಿಸುವ, ಪರಿಸರ ಸ್ನೇಹಿ ಜೀವನಶೈಲಿಗಾಗಿ ಬಳಸುವ ಉತ್ಪನ್ನಗಳು, ಉದ್ಯೋಗವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆಯು ‘ದುರಸ್ತಿ ಹಕ್ಕು’ ಎಂಬ ಸಮಗ್ರ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಸಮಿತಿ ರಚಿಸಿದೆ. ಜುಲೈ 13 ರಂದು ನಡೆದ ತನ್ನ ಮೊದಲ ಸಭೆಯಲ್ಲಿ, ಸಮಿತಿಯು ಕೃಷಿ ಉಪಕರಣಗಳು, ಮೊಬೈಲ್ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು, ಗ್ರಾಹಕ ಬೆಲೆಬಾಳುವ ವಸ್ತುಗಳು, ಆಟೋಮೊಬೈಲ್‌ಗಳು ಮತ್ತು ಆಟೋಮೊಬೈಲ್ ಉಪಕರಣಗಳಂತಹ ವಿವಿಧ ವಲಯಗಳನ್ನು ಗುರುತಿಸಿದೆ.

ಯಾವುದೇ ಗ್ಯಾಜೆಟ್‌ನ ವಿನ್ಯಾಸವು ನಿರ್ದಿಷ್ಟ ಸಮಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ನಿರ್ದಿಷ್ಟ ಅವಧಿಯ ನಂತರ ಅದನ್ನು ಕಡ್ಡಾಯವಾಗಿ ಬದಲಾಯಿಸಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ. ರಿಪೇರಿ ಮಾಡಲು ಬಳಕೆದಾರರಿಗೆ ಸಹಾಯ ಮಾಡುವ ಕೈಪಿಡಿಗಳನ್ನು ಕಂಪನಿಗಳು ಪ್ರಕಟಿಸುವುದನ್ನು ತಪ್ಪಿಸುವುದು, ಬಿಡಿಭಾಗಗಳ ಮೇಲೆ ಸ್ವಾಮ್ಯದ ನಿಯಂತ್ರಣ, ರಿಪೇರಿ ಮೇಲಿನ ಏಕಸ್ವಾಮ್ಯ ಮುಂತಾದ ವಿಷಯಗಳು ಸಮಿತಿಯ ಸಭೆಯಲ್ಲಿ ಚರ್ಚೆಯಾಗಿವೆ.  ‘ರಿಪೇರಿ ಹಕ್ಕು’ ಪ್ರಪಂಚದಾದ್ಯಂತ ಬೆಳೆಯುತ್ತಿರುವ ವಿದ್ಯಮಾನವಾಗಿದೆ.

ಉದಾಹರಣೆಗೆ ಅಮೆರಿಕದಲ್ಲಿ ಫೆಡರಲ್ ಟ್ರೇಡ್ ಕಮಿಷನ್, ಅನ್ಯಾಯ, ಸ್ಪರ್ಧಾತ್ಮಕ-ವಿರೋಧಿ ಅಭ್ಯಾಸಗಳನ್ನು ನಿವಾರಿಸಲು ತಯಾರಕರಿಗೆ ನಿರ್ದೇಶನ ನೀಡಿದೆ. ಗ್ರಾಹಕರು ಸ್ವತಃ ಅಥವಾ ಮೂರನೇ ವ್ಯಕ್ತಿಯ ಏಜೆನ್ಸಿ ಮೂಲಕ ರಿಪೇರಿ ಮಾಡಬಹುದೆಂದು ಖಚಿತಪಡಿಸಿಕೊಳ್ಳಲು ಸೂಚಿಸಿದೆ. ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳ ತಯಾರಕರು ಸ್ವತಃ ಅಥವಾ ಸ್ಥಳೀಯ ರಿಪೇರಿ ಅಂಗಡಿಗಳಲ್ಲಿ ದುರಸ್ತಿಗಾಗಿ ಗ್ರಾಹಕರಿಗೆ ಬಿಡಿಭಾಗಗಳನ್ನು ಒದಗಿಸಬೇಕು ಎಂಬ ಕಾನೂನನ್ನು ಬ್ರಿಟನ್‌ ಹೊಂದಿದೆ. ಆಸ್ಟ್ರೇಲಿಯಾ ಉಚಿತ “ದುರಸ್ತಿ ಕೆಫೆ”ಗಳನ್ನೇ ತೆರೆದಿದೆ.

ಅಲ್ಲಿ ತಂತ್ರಜ್ಞರು ಸ್ವಯಂಸೇವಕರಾಗಿ ಕೌಶಲ್ಯಗಳನ್ನು ಉಚಿತವಾಗಿ ಹಂಚಿಕೊಳ್ಳುತ್ತಾರೆ. ಯುರೋಪಿಯನ್ ಯೂನಿಯನ್ನ ತಯಾರಕರು 10 ವರ್ಷಗಳ ಅವಧಿಗೆ ವೃತ್ತಿಪರ ರಿಪೇರಿ ಮಾಡುವವರಿಗೆ ಉತ್ಪನ್ನಗಳ ಭಾಗ ಒದಗಿಸುವುದನ್ನು ಕಾನೂನು ಬದ್ಧವಾಗಿ ಕಡ್ಡಾಯಗೊಳಿಸಿದೆ. ಸರ್ಕಾರ ರಚಿಸಿರೋ ಹೊಸ ಸಮಿತಿ ಇವನ್ನೆಲ್ಲ ಭಾರತೀಯ ಮಾರುಕಟ್ಟೆಗಳಿಗೆ ಅಳವಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಪ್ರಧಾನಿ ಮೋದಿ ಅವರ ಕನಸಾದ ಪರಿಸರಕ್ಕಾಗಿ ಜೀವನಶೈಲಿ ಎಂಬ ಧ್ಯೇಯವಾಕ್ಯದೊಂದಿಗೆ ‘ರೈಟ್ ಟು ರಿಪೇರ್‌’ ಎಂಬ ಹೊಸ ಯೋಜನೆ ತಲೆಯೆತ್ತಿದೆ. ಇದು ಮರುಬಳಕೆಗೆ ಒತ್ತು ನೀಡುತ್ತದೆ. ಉತ್ಪನ್ನದ ದುರಸ್ತಿಯನ್ನು ನಿರ್ಬಂಧಿಸಬೇಡಿ ಮತ್ತು ಹೊಸ ಮಾದರಿಯನ್ನು ಖರೀದಿಸಲು ಗ್ರಾಹಕರನ್ನು ಒತ್ತಾಯಿಸಬೇಡಿ ಎಂದು ಸರ್ಕಾರ ತಯಾರಕರಿಗೆ ಕಟ್ಟಪ್ಪಣೆ ಮಾಡಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...