ಮೈಸೂರು: ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಜನಸಂಕಲ್ಪ ಯಾತ್ರೆ ಮೂಲಕ ಮತದಾರರನ್ನು ಸೆಳೆಯುತ್ತಿದ್ದರೆ, ವಿಪಕ್ಷ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮೂಲಕ ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿದೆ. ಇದೀಗ ಜೆಡಿಎಸ್ ಪಂಚರತ್ನ ಯಾತ್ರೆಗೆ ಸಿದ್ಧತೆ ನಡೆಸಿದ್ದು, ಕೆಲ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ.
ಜೆಡಿಎಸ್ ತೊರೆಯಲು ಮುಂದಾಗಿದ್ದ ಹಿರಿಯ ಶಾಸಕ ಜಿ.ಟಿ.ದೇವೇಗೌಡರನ್ನು ಮನವೊಲಿಕೆ ಮಾಡುವಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಯಶಸ್ವಿಯಾಗಿದ್ದು, ಈ ಮೂಲಕ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತೆ ತನ್ನ ಕೋಟೆ ಭದ್ರಪಡಿಸಿಕೊಳ್ಳಲು ಕಸರತ್ತು ನಡೆಸಿದೆ.
ಅಲ್ಲದೇ ಮೈಸೂರು ಭಾಗದ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಜಿ.ಟಿ.ದೇವೇಗೌಡ ಹಾಗೂ ಹುಣಸೂರು ಕ್ಷೇತ್ರದಿಂದ ಜಿಟಿಡಿ ಪುತ್ರ ಹರೀಶ್ ಗೌಡ ಅವರಿಗೆ ಜೆಡಿಎಸ್ ಟಿಕೆಟ್ ಘೋಷಣೆ ಮಾಡಲಾಗಿದೆ. ಜವಾಬ್ದಾರಿ ನೀಡುತ್ತಿದ್ದಂತೆ ಶಾಸಕ ಜಿ.ಟಿ.ದೇವೇಗೌಡ ಆಕ್ಟೀವ್ ಆಗಿದ್ದು, ಕ್ಷೇತ್ರದಲ್ಲಿ ಸಂಚಾರ ನಡೆಸಿದ್ದಾರೆ.
ಕೆ.ಆರ್.ನಗರ ಕ್ಷೇತ್ರದಿಂದ ಶಾಸಕ ಸಾ.ರಾ.ಮಹೇಶ್, ಪಿರಿಯಾಪಟ್ಟಣ ಕೆ.ಮಹದೇವ್, ಟಿ.ನರಸಿಪುರದಿಂದ ಅಶ್ವಿನ್, ಹೆಚ್.ಡಿ.ಕೋಟೆ ಕ್ಷೇತ್ರದಿಂದ ಜಯಪ್ರಕಾಶ್ ಸ್ಪರ್ಧೆ ಸಾಧ್ಯತೆಯಿದೆ.