ಮೈಸೂರು: ಟಿಪ್ಪು ಎಕ್ಸ್ ಪ್ರೆಸ್ ಹೆಸರು ಬದಲಿಸುವಂತೆ ಒತ್ತಾಯಿಸಿರುವ ಸಂಸದ ಪ್ರತಾಪ್ ಸಿಂಹ, ಟಿಪ್ಪು ಎಕ್ಸ್ ಪ್ರೆಸ್ ಬದಲು ಒಡೆಯರ್ ಎಕ್ಸ್ ಪ್ರೆಸ್ ಎಂದು ಹೆಸರು ಬದಲಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರತಾಪ್ ಸಿಂಹ, ಮೈಸೂರು ಮಹಾರಾಜರ ಕೊಡುಗೆ ಅಪಾರ. ಮೈಸೂರಿಗೆ ರೈಲು ತಂದಿದ್ದು ಕೂಡ ಅವರೆ. ಹಾಗಾಗಿ ಟಿಪ್ಪು ಎಕ್ಸ್ ಪ್ರೆಸ್ ರೈಲು ಹೆಸರನ್ನು ಒಡೆಯರ್ ಎಕ್ಸ್ ಪ್ರೆಸ್ ಎಂದು ಬದಲಿಸಬೇಕು ಎಂಬುದು ಹಲವರ ಆಗ್ರಹ ಎಂದರು.
100 ಕೋಟಿ ಲೋನ್ ಆಮಿಷವೊಡ್ಡಿ ಒಂದು ಕೋಟಿ ರೂ. ವಂಚಿಸಿದ ಕಳ್ಳರು ಅಂದರ್..!
ಹಲವು ಕೊಡುಗೆಗಳನ್ನು ನೀಡಿದ ಮಹಾರಾಜರ ಹೆಸರಲ್ಲಿ ಒಂದು ರೈಲು ಇಲ್ಲ. ಆ ವಂಶವನ್ನು ನಾಶ ಮಾಡಲು ಹೋದವನ ಹೆಸರನ್ನು ರೈಲಿಗೆ ಇಡಲಾಗಿದೆ. ಟಿಪ್ಪು ಸುಲ್ತಾನ್ ಒಂದೇ ಒಂದು ಹಳಿ ಕೂಡ ಹಾಕಿಲ್ಲ, ಅಂತವನ ಹೆಸರು ಯಾಕೆ ಬೇಕು ? ಟಿಪ್ಪು ಎಕ್ಸ್ ಪ್ರೆಸ್ ಹೆಸರು ಬದಲಿಸಿಯೇ ತೀರುತ್ತೇವೆ ಎಂದು ಹೇಳಿದರು.
ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ, ರಾಜ್ಯದ ಯಾವ ಸಿಎಂ ಮಾಡದಷ್ಟು ಸಾಲವನ್ನು ಸಿದ್ದರಾಮಯ್ಯ ಅವರ ಅವಧಿಯಲ್ಲಿ ಮಾಡಲಾಗಿದೆ. ಅವರಿಗೆ ಅರ್ಥವ್ಯವಸ್ಥೆಯೇ ಗೊತ್ತಿಲ್ಲ. ಬಜೆಟ್ ಬಂದರೆ ಸಾಕು ಲಾ ಪಾಸ್ ಮಾಡಿದವರು, ಬಿಎ ಪಾಸ್ ಮಾಡಿದವರೂ ಕೂಡ ಆರ್ಥಿಕ ತಜ್ಞರಾಗಿಬಿಡುತ್ತಾರೆ ಎಂದು ಗುಡುಗಿದ್ದಾರೆ.
ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಅತಿ ಹೆಚ್ಚು ಸಾಲ ಮಾಡಿದ್ದಾರೆ. 13 ಬಜೆಟ್ ಮಂಡಿಸಿದ್ದಾರಷ್ಟೇ, ಅರ್ಥವ್ಯವಸ್ಥೆಯ ಅರಿವಿಲ್ಲ ಅವರಿಗೆ. ನಮ್ಮ ಸರ್ಕಾರ ಸಾಲ ಮಾಡಿದ ಹಣವನ್ನು ದೇಶದ ಅಭಿವೃದ್ಧಿಗೆ ಉಪಯೋಗಿಸಿದರೆ ಕಾಂಗ್ರೆಸ್ ನವರು ಸಾಲ ಮಾಡಿ ತಮ್ಮ ಖಜಾನೆ ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.